
ಪುಣೆ: ಅಲ್ ಖೈದಾ ಜತೆ ಸಂಪರ್ಕ ಹೊಂದಿದ ಹಾಗೂ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಶಂಕೆಯ ಮೇಲೆ ಎರಡು ತಿಂಗಳ ಹಿಂದೆ ಬಂಧಿಸಲ್ಪಟ್ಟಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಜುಬೇರ್ ಹಂಗರ್ಗೇಕರ್ ಅವರನ್ನು ಮಹಾರಾಷ್ಟ್ರ ಎಟಿಎಸ್ ಮತ್ತೆ ತನ್ನ ವಶಕ್ಕೆ ಪಡೆದುಕೊಂಡಿದೆ.
ನ್ಯಾಯಾಂಗ ಬಂಧನಲ್ಲಿದ್ದ ಜುಬೇರ್ ಅವರನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ (ಯುಎಪಿಎ) ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯವು ಎಟಿಎಸ್ ವಶಕ್ಕೆ ನೀಡಿದೆ.
‘ಜುಬೇರ್ ಅವರನ್ನು ಬುಧವಾರ ಎಟಿಎಸ್ ತನ್ನ ವಶಕ್ಕೆ ತೆಗೆದುಕೊಂಡಿತು. ನ್ಯಾಯಾಲಯವು ಅವರನ್ನು ಜನವರಿ 3ರವರೆಗೆ ಎಟಿಎಸ್ ಕಸ್ಟಡಿಗೆ ನೀಡಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಯೋತ್ಪಾದನಾ ಪ್ರಕರಣಗಳಲ್ಲಿ ಭಾಗಿಯಾದ ಆರೋಪದಲ್ಲಿ ಬಂಧಿತ ವ್ಯಕ್ತಿಯನ್ನು ಯುಎಪಿಎ ಅಡಿಯಲ್ಲಿ, ಗರಿಷ್ಠ 30 ದಿನ ಪೊಲೀಸ್ ಕಸ್ಟಡಿಯಲ್ಲಿಡಬಹುದು. ನಿಷೇಧಿತ ಭಯೋತ್ಪಾದನಾ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ ಶಂಕೆಯಲ್ಲಿ 37 ವರ್ಷದ ಜುಬೇರ್ ಅವರನ್ನು ಅಕ್ಟೋಬರ್ 27ರಂದು ಬಂಧಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.