ADVERTISEMENT

ಭ್ರಷ್ಟಾಚಾರ ತಡೆ ಸಹಾಯವಾಣಿಗೆ ಖಾಸಗಿ ವಾಟ್ಸ್‌ಆ್ಯಪ್ ಸಂಖ್ಯೆ; ಪಂಜಾಬ್ ಸಿಎಂ ಮಾನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಮಾರ್ಚ್ 2022, 10:53 IST
Last Updated 17 ಮಾರ್ಚ್ 2022, 10:53 IST
ಪಂಜಾಬ್‌ ಸಿಎಂ ಭಗವಂತ್ ಮಾನ್‌
ಪಂಜಾಬ್‌ ಸಿಎಂ ಭಗವಂತ್ ಮಾನ್‌   

ಚಂಡೀಗಡ: ಪಂಜಾಬ್‌ ನೂತನ ಮುಖ್ಯಮಂತ್ರಿ ಭಗವಂತ ಮಾನ್‌ ಅವರು ಭ್ರಷ್ಟಾಚಾರ ನಿಯಂತ್ರಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ತಡೆ ಸಂಬಂಧ ಸಹಾಯವಾಣಿ ಆರಂಭಿಸುವುದಾಗಿ ಗುರುವಾರ ಘೋಷಿಸಿದ್ದಾರೆ.

ಮಾರ್ಚ್‌ 23, ಹುತಾತ್ಮರ ದಿನದಂದು (ಶಾಹೀದ್‌ ದಿವಸ್‌) ಸಾರ್ವಜನಿಕರ ದೂರುಗಳನ್ನು ದಾಖಲಿಸಿಕೊಳ್ಳುವ ಸಹಾಯವಾಣಿಗೆ ಚಾಲನೆ ಸಿಗಲಿದೆ.

ಆ ಸಹಾಯವಾಣಿಯ ಮೂಲಕ ಜನರು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದೂರು ದಾಖಲಿಸಬಹುದಾಗಿದೆ. ವಾಟ್ಸ್‌ಆ್ಯಪ್‌ನಲ್ಲೇ ದೂರು ದಾಖಲಿಸಲು ವ್ಯವಸ್ಥೆ ರೂಪಿಸುತ್ತಿರುವುದಾಗಿ ವರದಿಯಾಗಿದೆ.

ADVERTISEMENT

'ಹುತಾತ್ಮರ ದಿನದಂದು (ಮಾರ್ಚ್‌ 23) ಸಹಾಯವಾಣಿಗೆ ಚಾಲನೆ ನೀಡುತ್ತಿದ್ದು, ಅದಕ್ಕೆ ನಾನು ನನ್ನ ಖಾಸಗಿ ವಾಟ್ಸ್‌ಆ್ಯಪ್‌ ಸಂಖ್ಯೆಯನ್ನೇ ನೀಡುತ್ತಿದ್ದೇನೆ. ಪಂಜಾಬ್‌ನಲ್ಲಿ ನಿಮಗೆ ಯಾರಾದರೂ ಲಂಚಕ್ಕಾಗಿ ಬೇಡಿಕೆ ಇಟ್ಟರೆ, ವಿಡಿಯೊ ಅಥವಾ ಆಡಿಯೊ ರೆಕಾರ್ಡ್‌ ಮಾಡಿಕೊಳ್ಳಿ ಹಾಗೂ ಆ ಸಂಖ್ಯೆಗೆ ಕಳುಹಿಸಿ. ನಮ್ಮ ಕಚೇರಿಯು ಅದನ್ನು ಪರಿಶೀಲಿಸುತ್ತದೆ ಹಾಗೂ ತಪ್ಪಿತಸ್ಥರನ್ನು ಸುಮ್ಮನೆ ಬಿಡುವುದಿಲ್ಲ' ಎಂದು ಭಗವಂತ ಮಾನ್‌ ಹೇಳಿದ್ದಾರೆ.

ಬುಧವಾರ ಮಾನ್‌ ಅವರು ಪಂಜಾಬ್‌ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಪೂರ್ವಜರ ಊರು ಖಟಕಡ್ ಕಲಂನಲ್ಲಿ ನಡೆದ ಸಮಾರಂಭದಲ್ಲಿ ಅಧಿಕಾರ ವಹಿಸಿಕೊಂಡ ಮಾನ್, ನಿರುದ್ಯೋಗ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಪ್ರತಿಜ್ಞೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.