ADVERTISEMENT

Assembly Elections 2022: ‘ಭಯ್ಯಾ’ ಮಾತು: ಸಿ.ಎಂ ಚನ್ನಿಗೆ ತರಾಟೆ

ಪ್ರಧಾನಿ ಮೋದಿ, ಮುಖ್ಯಮಂತ್ರಿಗಳಾದ ಕೇಜ್ರಿವಾಲ್, ನಿತೀಶ್ ಕುಮಾರ್ ಟೀಕಾ ಪ್ರಹಾರ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2022, 20:30 IST
Last Updated 17 ಫೆಬ್ರುವರಿ 2022, 20:30 IST
ಪಂಜಾಬ್ ಮುಖ್ಯಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಹಾಗೂ ರಾಜ್ಯ ಕಾಂಗ್ರೆಸ್ ಘಟಕದ ನವಜೋತ್ ಸಿಂಗ್ ಸಿಧು ಅವರು ಅಮೃತಸರದಲ್ಲಿ ಒಟ್ಟಾಗಿ ರೋಡ್‌ಶೋ ನಡೆಸಿದರು.
ಪಂಜಾಬ್ ಮುಖ್ಯಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಹಾಗೂ ರಾಜ್ಯ ಕಾಂಗ್ರೆಸ್ ಘಟಕದ ನವಜೋತ್ ಸಿಂಗ್ ಸಿಧು ಅವರು ಅಮೃತಸರದಲ್ಲಿ ಒಟ್ಟಾಗಿ ರೋಡ್‌ಶೋ ನಡೆಸಿದರು.    

ಅಬೊಹರ್/ಪಟ್ನಾ/ನವದೆಹಲಿ: ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರ ‘ಭಯ್ಯಾ’ ಹೇಳಿಕೆ ಟೀಕೆಗಳಿಗೆ ಕಾರಣವಾಗಿದೆ. ‘ಉತ್ತರ ಪ್ರದೇಶ, ಬಿಹಾರ ಹಾಗೂ ದೆಹಲಿಯ ಭಯ್ಯಾಗಳನ್ನು ರಾಜ್ಯ ಪ್ರವೇಶಿಸಲು ಬಿಡಬೇಡಿ’ ಎಂದು ಚನ್ನಿ ಅವರು ಬುಧವಾರ ನಡೆದ ಚುನಾವಣಾ ಪ್ರಚಾರದ ವೇಳೆ ಹೇಳಿದ್ದರು. ಪಂಜಾಬ್‌ನಲ್ಲಿ ಚನ್ನಿ ‍ಸರ್ಕಾರಕ್ಕೆ ಪ್ರಬಲ ಪ್ರತಿಸ್ಪ‌ರ್ಧೆ ಒಡ್ಡುತ್ತಿರುವ ಆಮ್ ಆದ್ಮಿ ಪಕ್ಷದ (ಎಎಪಿ) ಮುಖಂಡರನ್ನು ಉದ್ದೇಶಿಸಿ ಈ ಹೇಳಿಕೆ ನೀಡಲಾಗಿದೆ ಎಂದು ಕಾಂಗ್ರೆಸ್ ಹೇಳಿದೆ.

ಪಂಜಾಬ್‌ನ ಅಬೊಹರ್‌ನಲ್ಲಿ ಗುರುವಾರ ಬಿಜೆಪಿ ಚುನಾವಣಾ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ಇಂತಹ ವಿಭಜಕ ಚಿಂತನೆಗಳನ್ನು ಹೊಂದಿರುವ ವ್ಯಕ್ತಿಗಳಿಗೆ ರಾಜ್ಯದಲ್ಲಿ ಆಡಳಿತ ನಡೆಸಲು ಯಾವುದೇ ಅಧಿಕಾರವಿಲ್ಲ’ ಎಂದುಚನ್ನಿ ಅವರನ್ನು ತರಾಟೆಗೆ ತೆಗೆದುಕೊಂಡರು.

ಚನ್ನಿ ಅವರು ನೀಡಿದ ಭಯ್ಯಾ ಹೇಳಿಕೆ ಇರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರೂಪ್‌ನಗರದಲ್ಲಿ ಚನ್ನಿ ಅವರು ಈ ಮಾತು ಹೇಳಿದಾಗ, ಅವರ ಪಕ್ಕದಲ್ಲಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಚಪ್ಪಾಳೆ ತಟ್ಟಿದ ದೃಶ್ಯ ಈ ವಿಡಿಯೊದಲ್ಲಿದೆ.

ADVERTISEMENT

ಸಾಮಾನ್ಯವಾಗಿ ಬಿಹಾರ ಹಾಗೂ ಉತ್ತರ ಪ್ರದೇಶದ ವಲಸೆ ಕಾರ್ಮಿಕರನ್ನು ಕರೆಯಲು ಪಂಜಾಬ್‌ನಲ್ಲಿ ಭಯ್ಯಾ ಎಂಬ ಪದವನ್ನು ಬಳಸಲಾಗುತ್ತದೆ.

ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ಕಾಂಗ್ರೆಸ್ ತನ್ನ ಲಾಭಕ್ಕೋಸ್ಕರ ಯಾವಾಗಲೂ ಒಂದು ಭಾಗದ ಜನರನ್ನು ಮತ್ತೊಂದು ಪ್ರದೇಶದ ಜನರ ವಿರುದ್ಧ ಎತ್ತಿಕಟ್ಟುತ್ತದೆ’ ಎಂದು ಹೇಳಿದ್ದಾರೆ. ‘ಚನ್ನಿ ಹೇಳಿದ ಮಾತುಗಳು ಹಾಗೂ ಆ ಸಮಯದಲ್ಲಿ ಅವರ ಪಕ್ಷದ ನಾಯಕಿ ಅದನ್ನು ಪ್ರಶಂಸಿಸಿದ್ದನ್ನು ಇಡೀ ದೇಶ ನೋಡಿದೆ.ಇಂತಹ ಹೇಳಿಕೆಗಳ ಮೂಲಕ ಅವರು ಯಾರನ್ನು ಅಪಮಾನಿಸಲು ಹೊರಟಿದ್ದಾರೆ’ ಎಂದು ಅವರು ಪ್ರಶ್ನಿಸಿದ್ದಾರೆ.

‘ನಿನ್ನೆಯಷ್ಟೇ ಸಂತಗುರು ರವಿದಾಸರ ಜಯಂತಿ ಆಚರಿಸಲಾಯಿತು. ರವಿದಾಸರು ಜನಿಸಿದ್ದು ಎಲ್ಲಿ ಎಂದು ನಾನು ಈ ನಾಯಕರನ್ನು ಕೇಳಬಯಸುತ್ತೇನೆ. ಅವರು ಪಂಜಾಬ್‌ನಲ್ಲಿ ಜನಿಸಿದರೇ? ಅವರು ಹುಟ್ಟಿದ್ದು ಉತ್ತರ ಪ್ರದೇಶದ ವಾರಾಣಸಿಯಲ್ಲಿ. ಆದರೆ ಉತ್ತರ ಪ್ರದೇಶದ ಭಯ್ಯಾಗಳಿಗೆ ಪಂಜಾಬ್ ಪ್ರವೇಶ ನಿರ್ಬಂಧಿಸುವ ಮಾತನಾಡುತ್ತೀರಿ. ಹಾಗಾದರೆ ರವಿದಾಸರ ಅನುಯಾಯಿಗಳನ್ನು ಓಡಿಸುತ್ತೀರಾ. ಸಂತರ ಹೆಸರನ್ನು ಅಳಿಸಿಹಾಕುತ್ತೀರಾ. ನೀವು ಮಾತನಾಡುತ್ತಿರುವ ಭಾಷೆ ಯಾವುದು’ ಎಂದು ಮೋದಿ ಅವರು ಟೀಕಾಪ್ರಹಾರ ಮಾಡಿದ್ದಾರೆ.

‘ಗುರುಗೋವಿಂದ ದಾಸರು ಹುಟ್ಟಿದ್ದು ಬಿಹಾರದ ಪಟ್ನಾದಲ್ಲಿ. ಬಿಹಾರದ ಜನರನ್ನು ಪಂಜಾಬ್‌ಗೆ ಬರಬೇಡಿ ಎಂದು ನೀವು ಹೇಳುತ್ತಿದ್ದೀರಿ. ಹಾಗಾದರೆ ಗುರು ಗೋವಿಂದ ಸಿಂಗ್ ಅವರನ್ನೂ ನೀವು ಅಪಮಾನಿಸುತ್ತೀರಾ. ಗೋವಿಂದ ಸಿಂಗ್ ಅವರು ಹುಟ್ಟಿನ ನಾಡನ್ನು ಅಪಮಾನಿಸುತ್ತೀರಾ’ ಎಂದು ಪ್ರಶ್ನಿಸಿದ್ದಾರೆ.

***

ಚನ್ನಿ ಮಾತು ಮೂರ್ಖತನದ್ದು. ಬಿಹಾರದ ಎಷ್ಟು ಜನರು ಪಂಜಾಬ್‌ನಲ್ಲಿ ನೆಲೆಸಿದ್ದಾರೆ ಮತ್ತು ರಾಜ್ಯಕ್ಕೆ ಎಷ್ಟು ಸೇವೆ ಸಲ್ಲಿಸಿದ್ದಾರೆ ಎಂಬ ಬಗ್ಗೆ ಚನ್ನಿ ಅವರಿಗೆ ಅರಿವಿದೆಯೇ?

-ನಿತೀಶ್ ಕುಮಾರ್, ಬಿಹಾರ ಮುಖ್ಯಮಂತ್ರಿ

***

ಭಾರತದಂತಹ ಒಕ್ಕೂಟ ವ್ಯವಸ್ಥೆಯಲ್ಲಿ ಇಂತಹ ಹೇಳಿಕೆ ನೀಡುವುದು ನಾಚಿಕೆಗೇಡು. ಯಾವುದೇ ರಾಜ್ಯ ಅಥವಾ ಜನಾಂಗದ ಕುರಿತು ಮಾತನಾಡುವುದು ಸರಿಯಲ್ಲ

-ಅರವಿಂದ ಕೇಜ್ರಿವಾಲ್, ದೆಹಲಿ ಮುಖ್ಯಮಂತ್ರಿ

***

ನನ್ನ ಹೇಳಿಕೆಯನ್ನು ತಿರುಚಲಾಗಿದೆ. ರಾಜ್ಯಕ್ಕಾಗಿ ರಕ್ತ, ಬೆವರು ಹರಿಸಿದವರಿಗೆ ನಮ್ಮ ಹೃದಯದಲ್ಲಿ ಸ್ಥಾನ ನೀಡಲಾಗಿದೆ. ಹೊರಗಿನಿಂದ ಬಂದ ಎಎಪಿ ನಾಯಕರನ್ನು ಮಾತ್ರ ನಾನು ಟೀಕಿಸಿದ್ದೆ

-ಚರಣ್‌ಜಿತ್ ಸಿಂಗ್ ಚನ್ನಿ, ಪಂಜಾಬ್ ಮುಖ್ಯಮಂತ್ರಿ

***

ಚನ್ನಿ ಹೇಳಿಕೆ ನಾಚಿಕೆಗೇಡಿನದ್ದು. ಬಿಜೆಪಿಯು ದೇಶದ ಜನರನ್ನು ಒಗ್ಗೂಡಿಸಿದರೆ, ಕಾಂಗ್ರೆಸ್ ಒಡೆಯುತ್ತದೆ. ಪಂಜಾಬ್ ಅಭಿವೃದ್ಧಿಗೆ ಬಿಹಾರ, ಉತ್ತರ ಪ್ರದೇಶದ ಜನರೂ ಕೊಡುಗೆ ನೀಡುತ್ತಿದ್ದಾರೆ

-ಸ್ಮೃತಿ ಇರಾನಿ, ಕೇಂದ್ರ ಸಚಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.