ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ತೀವ್ರ ಮಳೆಯೊಗುತ್ತಿದ್ದು, ವೃದ್ಧೆಯೊಬ್ಬರು ಅರ್ಥ ಮುಗಿದ ಮನೆಯಲ್ಲಿಯೇ ಭಾನುವಾರ ದಿನ ಕಳೆದರು
–ಪಿಟಿಐ ಚಿತ್ರ
ನವದೆಹಲಿ/ಜಮ್ಮು/ಶಿಮ್ಲಾ/ಚಂಡೀಗಢ: ಪಂಜಾಬ್‌ನಲ್ಲಿ ಆಗಸ್ಟ್ ತಿಂಗಳಲ್ಲಿ 253.7 ಮೀ.ಮೀನಷ್ಟು ಮಳೆ ಸುರಿದಿದೆ. ಈ ಪ್ರಮಾಣವು ಸಾಮಾನ್ಯಕ್ಕಿಂತ ಶೇ 74ರಷ್ಟು ಅಧಿಕವಾಗಿದೆ. ಕಳೆದ 25 ವರ್ಷಗಳಲ್ಲೇ ಈ ಪ್ರಮಾಣದ ಮಳೆಯನ್ನು ರಾಜ್ಯ ಕಂಡಿರಲಿಲ್ಲ ಎಂದು ಅಧಿಕಾರಿಗಳು ಹೇಳಿದರು.
ಭಾರಿ ಮಳೆಯಿಂದಾಗಿ ಜಮ್ಮು ಮತ್ತು ಪಂಜಾಬ್ ರಾಜ್ಯಗಳ ಹಲವು ಭಾಗಗಳಲ್ಲಿ ತೀವ್ರ ಸ್ವರೂಪದ ಪ್ರವಾಹ ಉಂಟಾಗಿದೆ. ರಸ್ತೆ, ಹೆದ್ದಾರಿಗಳು ಕೊಚ್ಚಿಕೊಂಡು ಹೋಗಿವೆ. ಇಲ್ಲಿನ ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿವೆ. ಹಲವು ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ. ದ್ವೀಪಗಳಂತಾದ ಪ್ರದೇಶಗಳಲ್ಲಿ ಜನರು ಸಿಲುಕಿಕೊಂಡಿದ್ದಾರೆ. ಸೆಪ್ಟೆಂಬರ್ 3ರವರೆಗೆ ಶಾಲೆಗಳಿಗೆ ರಜೆಯನ್ನು ವಿಸ್ತರಿಸಿ ಪಂಜಾಬ್ ಸರ್ಕಾರ ಆದೇಶಿಸಿದೆ.
ಈ ರಾಜ್ಯಗಳಲ್ಲಿ ಭಾನುವಾರವೂ ಭಾರಿ ಮಳೆ ಮುಂದುವರಿದಿದೆ. ಜನರ ಸುರಕ್ಷತೆಗಾಗಿ ಸೇನೆಯು ‘ಮಾನವ ನೆರವು ಮತ್ತು ವಿಪತ್ತು ಪರಿಹಾರ’ (ಎಚ್‌ಎಡಿಆರ್) ಕಾರ್ಯಾಚರಣೆ ನಡೆಸುತ್ತಿದೆ. ರಕ್ಷಣಾ ಕಾರ್ಯಕ್ಕಾಗಿ ಮತ್ತು ಆಹಾರ, ಅಗತ್ಯ ವಸ್ತುಗಳ ವಿತರಣೆಗಾಗಿ ವಾಯುಪಡೆಯು 20 ವಿಮಾನಗಳು, ಮೂರು ಹೆಲಿಕಾಪ್ಟರ್‌ಗಳು ಸೇರಿದಂತೆ ಹಲವು ಹೆಲಿಕಾಪ್ಟರ್‌ಗಳನ್ನು ಸನ್ನದ್ಧು ಸ್ಥಿತಿಯಲ್ಲಿ ಇರಿಸಲಾಗಿದೆ.
₹60 ಸಾವಿರ ಕೋಟಿ ಬಿಡುಗಡೆ ಮಾಡಿ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ₹60 ಸಾವಿರ ಕೋಟಿ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ‘ಇದು ರಾಜ್ಯದ್ದೇ ಅನುದಾನ. ಅದು ನಿಮ್ಮ ಬಳಿ ಸಿಲುಕಿಕೊಂಡಿದೆ’ ಎಂದೂ ಹೇಳಿದ್ದಾರೆ.
ಶಾ ಭೇಟಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಎರಡು ದಿನಗಳ ಭೇಟಿ ನೀಡಲಿದ್ದಾರೆ ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮಾಹಿತಿ ನೀಡಿದರು. ಜಮ್ಮು ಮತ್ತು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯು ಮಳೆಯ ಕಾರಣ ಹಾನಿಗೊಳಗಾಗಿದ್ದು, ಇದರ ದುರಸ್ತಿ ಕಾರ್ಯವನ್ನು ಒಮರ್ ಭಾನುವಾರ ವೀಕ್ಷಿಸಿದರು.
ತೀವ್ರ ಮಳೆಯಿಂದಾಗಿ ಹಿಮಾಚಲ ಪ್ರದೇಶದ ಮೂರು ರಾಷ್ಟ್ರೀಯ ಹೆದ್ದಾರಿಗಳೂ ಸೇರಿ ಒಟ್ಟು 822 ರಸ್ತೆಗಳು ಮುಚ್ಚಿವೆ. 1,236 ವಿದ್ಯುತ್ ಪರಿವರ್ತಕಗಳು ಮತ್ತು 424 ಜಲ ಪೂರೈಕೆ ಯೋಜನೆಗಳಿಗೆ ಹಾನಿಯಾಗಿದೆ.
ತಾಯಿ ಶಿಶು ರಕ್ಷಣೆ: ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯಲ್ಲಿ ಗ್ರಾಮವೊಂದರಲ್ಲಿ ಮನೆಯೊಂದು ಅರ್ಧ ಮುಳುಗಿದೆ. 15 ದಿನಗಳ ಶಿಶು ಮತ್ತು ತಾಯಿ ನಾಲ್ಕು ದಿನಗಳಿಂದ ಮನೆಯ ಮೊದಲ ಮಹಡಿಯಲ್ಲಿಯೇ ಸಿಲುಕಿಕೊಂಡಿದ್ದರು. ಸೇನೆಯು ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ರಕ್ಷಿಸಿದೆ.
‘ಪ್ರತೀ ಭಾರತೀಯನಿಗೂ ದುಃಖ ತರಿಸಿದೆ’
ಮಳೆಗಾಲದಲ್ಲಿ ನೈಸರ್ಗಿಕ ವಿಪತ್ತುಗಳು ದೇಶವನ್ನು ಪರೀಕ್ಷಿಸುತ್ತವೆ. ಕಳೆದ ಕೆಲವು ವಾರಗಳಿಂದ ನಾವು ತೀವ್ರ ಪ್ರವಾಹ ಹಾಗೂ ಭೂಕುಸಿತವನ್ನು ಕಂಡಿದ್ದೇವೆ. ಮನೆಗಳು ಕುಸಿದು ಬಿದ್ದಿವೆ ಕೃಷಿ ಭೂಮಿ ಮುಳುಗಿವೆ ರಸ್ತೆಗಳು ಕೊಚ್ಚಿ ಹೋಗಿವೆ ಜನರ ಜೀವಗಳಿಗೆ ಆಪತ್ತು ಎದುರಾಗಿದೆ. ಇಂಥ ಘಟನೆಗಳು ಪ್ರತಿಯೊಬ್ಬ ಭಾರತೀಯನನ್ನೂ ದುಃಖಿತನನ್ನಾಗಿ ಮಾಡಿವೆ. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಕಾರ್ಯಗಳು ಶ್ಲಾಘನಾರ್ಹವಾಗಿವೆ ನರೇಂದ್ರ ಮೋದಿ ಪ್ರಧಾನಿ (‘ಮನದ ಮಾತು’ ರೇಡಿಯೊ ಕಾರ್ಯಕ್ರಮದಲ್ಲಿ ಆಡಿದ ಮಾತು)
‘ಸೆಪ್ಟೆಂಬರ್‌ನಲ್ಲಿ ದೇಶದಲ್ಲಿ ಭಾರಿ ಮಳೆ’
ಸೆಪ್ಟೆಂಬರ್ ತಿಂಗಳಲ್ಲಿ ದೇಶದ ವಿವಿಧೆಡೆ ವಾಡಿಕೆಗಿಂತ ಅಧಿಕ ಮಳೆಯಾಗಲಿದೆ. ಭಾರಿ ಮಳೆಯಾಗುವ ಕಾರಣ ಭೂಕುಸಿತ ಪ್ರವಾಹ ಸೇರಿದಂತೆ ಹಲವು ವಿಪತ್ತು ಎದುರಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಾಮಾನ್ಯವಾಗಿ ಸೆಪ್ಟೆಂಬರ್‌ನಲ್ಲಿ ಸರಾಸರಿ 167.9 ಮೀ.ಮೀ ಮಳೆಯಾಗುತ್ತದೆ. ಈ ಬಾರಿ ವಾಡಿಕೆಗಿಂತ ಶೇ 109ಕ್ಕೂ ಅಧಿಕ ಮಳೆಯಾಗಲಿದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ
ಉತ್ತರಾಖಂಡ: ಸೆಪ್ಟೆಂಬರ್‌ನಲ್ಲಿ ಭೂಕುಸಿತ ದಿಢೀರ್ ಪ್ರವಾಹ ಉಂಟಾಗಬಹುದು. ರಾಜ್ಯದಲ್ಲಿ ಹುಟ್ಟುವ ನದಿಗಳು ಉಕ್ಕಿ ಹರಿಯಲಿವೆ. ಇದರಿಂದ ತಗ್ಗು ಪ್ರದೇಶದಲ್ಲಿರವ ನಗರಗಳಿಗೆ ತೀವ್ರ ಹಾನಿಯಾಗಲಿದೆ.
ಸುರಂಗದಲ್ಲಿ ಸಿಲುಕಿದ ಕಾರ್ಮಿಕರು
ಪಿತೋರಗಢ: ತೀವ್ರ ಮಳೆಯಿಂದ ಉಂಟಾದ ಭೂಕುಸಿತದಿಂದ ರಸ್ತೆ ಸಂಪರ್ಕ ಕಡಿತಗೊಂಡು ರಾಷ್ಟ್ರೀಯ ಜಲವಿದ್ಯುತ್ ಶಕ್ತಿ ನಿಗಮ ಲಿಮಿಟೆಡ್‌ನ 19 ಕಾರ್ಮಿಕರು ಉತ್ತರಾಖಂಡದ ಘರಚೂಲಾ ಜಿಲ್ಲೆಯಲ್ಲಿರುವ ದೌಲಿಗಂಗಾ ವಿದ್ಯುತ್ ಯೋಜನೆಯ ಸುರಂಗದಲ್ಲಿ ಭಾನುವಾರ ಸಿಲುಕಿಕೊಂಡಿದ್ದರು.
ಎಂಟು ಕಾರ್ಮಿಕರನ್ನು ಹೊರಗೆ ಕರೆತರಲಾಗಿದೆ. ಉಳಿದ 11 ಮಂದಿ ಇನ್ನೂ ಸುರಂಗದಲ್ಲಿಯೇ ಸಿಲುಕಿಕೊಂಡಿದ್ದಾರೆ. ರಕ್ಷಣಾ ಕಾರ್ಯ ಮುಂದುವರಿದಿದೆ.
‘ಭೂಕುಸಿತದ ಕಾರಣ ಸುರಂಗದ ಎರಡೂ ಬದಿ ಬಂಡೆಗಳು ಬಿದ್ದಿವೆ. ಅವುಗಳನ್ನು ತೆರವುಗೊಳಿಸಲು ಜೆಸಿಬಿ ಯಂತ್ರಗಳನ್ನು ತರಲಾಗಿದೆ. ಕಾರ್ಮಿಕರು ಸುರಂಗದ ಒಳಗೆ ಸುರಕ್ಷಿತವಾಗಿದ್ದಾರೆ. ಸುರಂಗದಲ್ಲಿ ಸಾಕಷ್ಟು ಆಹಾರ ದಾಸ್ತಾನು ಇದೆ. ಆದ್ದರಿಂದ ಭಯಪಡುವ ಅಗತ್ಯ ಇಲ್ಲ’ ಎಂದು ಜಿಲ್ಲಾಧಿಕಾರಿ ಜಿತೇಂದ್ರ ವರ್ಮಾ ತಿಳಿಸಿದರು.
‘ಭೂಕುಸಿತದಿಂದ ಅವಶೇಷಗಳು ನಿರಂತರವಾಗಿ ಬೀಳುತ್ತಿವೆ. ಇದರಿಂದ ರಕ್ಷಣಾ ಕಾರ್ಯಕ್ಕೆ ತೊಡಕಾಗಿದೆ. ವಿದ್ಯುತ್ ಉತ್ಪಾದನೆಗೆ ಯಾವುದೇ ತೊಡಕಾಗಿಲ್ಲ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.