ADVERTISEMENT

ರೈತ ವಿರೋಧಿ ಮಸೂದೆ ವಾಪಸ್‌ಗೆ ಆಗ್ರಹ: ಪಂಜಾಬ್‌ನಲ್ಲಿ ಭಾರಿ ಪ್ರತಿಭಟನೆ

ಹರಿಯಾಣದಲ್ಲೂ ಜಾಥಾ

ಪಿಟಿಐ
Published 25 ಸೆಪ್ಟೆಂಬರ್ 2020, 21:51 IST
Last Updated 25 ಸೆಪ್ಟೆಂಬರ್ 2020, 21:51 IST
ನೊಯ್ಡಾ–ದೆಹಲಿ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸಿದರು–ಪಿಟಿಐ ಚಿತ್ರಗಳು
ನೊಯ್ಡಾ–ದೆಹಲಿ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸಿದರು–ಪಿಟಿಐ ಚಿತ್ರಗಳು   

ಚಂಡೀಗಡ: ಹೊಸ ಕೃಷಿ ಮಸೂದೆಗಳನ್ನು ಖಂಡಿಸಿ ಪಂಜಾಬ್ ಹಾಗೂ ಹರಿಯಾಣದಲ್ಲಿ ರೈತರು ಶುಕ್ರವಾರ ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ಹೆದ್ದಾರಿ ಸೇರಿದಂತೆ ಪ್ರಮುಖ ರಸ್ತೆಗಳನ್ನು ಬಂದ್ ಮಾಡಿದ ರೈತರು, ಮಸೂದೆಗಳನ್ನು ವಾಪಸ್ ಪಡೆಯುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು. ರಸ್ತೆ ತಡೆ ನಡೆಸಿದ್ದರಿಂದ ಎರಡೂ ರಾಜ್ಯಗಳಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಯಿತು.

ಮಸೂದೆ ವಿರೋಧಿಸಿ ಕರೆ ನೀಡಲಾಗಿದ್ದ ‘ಪಂಬಾಜ್ ಬಂದ್‌’ಗೆ ಸರ್ಕಾರಿ ನೌಕರರ ಸಂಘಟನೆಗಳು, ಕಾರ್ಮಿಕರು, ಸಾಮಾಜಿಕ ಕಾರ್ಯ
ಕರ್ತರು ಬೆಂಬಲ ಸೂಚಿಸಿದ್ದರು. ಅಂಗಡಿಗಳು, ವಾಣಿಜ್ಯ ಮಳಿಗೆಗಳು, ತರಕಾರಿ ಮಾರುಕಟ್ಟೆಗಳನ್ನು ಮುಚ್ಚಲಾಗಿತ್ತು. ರಾಜ್ಯ ಸರ್ಕಾರಿ ಬಸ್‌ಗಳ ಸಂಚಾರ ಸ್ಥಗಿತಗೊಂಡಿತ್ತು.

ADVERTISEMENT

ಗುರುವಾರದಿಂದ ಮೂರು ದಿನಗಳ ‘ರೈಲು ತಡೆ’ ಚಳವಳಿಗೆ ಕರೆ ನೀಡಲಾಗಿದೆ. 31 ರೈತ ಸಂಘಟನೆಗಳು ರಾಜ್ಯವನ್ನು ಸಂಪೂರ್ಣ ಬಂದ್‌ ಮಾಡಿದ್ದವು. ರೈತರ ಪ್ರತಿಭಟನೆಗೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಬೆಂಬಲ ಸೂಚಿಸಿದ್ದಾರೆ. ಪ್ರತಿಭಟನಾನಿರತರ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

ಆಡಳಿತಾರೂಢ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷಗಳು ಪ್ರತಿಭಟನೆಯನ್ನು ಬೆಂಬಲಿಸಿದ್ದವು. ಶಿರೋಮಣಿ ಅಕಾಲಿದಳ ಪಕ್ಷವು ರಾಜ್ಯದ ಹಲವು ಕಡೆ ರಸ್ತೆ ತಡೆ ಹಾಗೂ ಟ್ರ್ಯಾಕ್ಟರ್ ಜಾಥಾ ನಡೆಸಿತು.ಮುಕ್ತಸರ ಜಿಲ್ಲೆಯಲ್ಲಿ ಅಕಾಲಿದಳದ ಮುಖ್ಯಸ್ಥ ಸುಖ್‌ಬೀರ್ ಸಿಂಗ್ ಬಾದಲ್ ಅವರು ಟ್ರ್ಯಾಕ್ಟರ್ ಚಲಾಯಿಸಿದರು. ಅವರ ಪತ್ನಿ, ಮಾಜಿ ಕೇಂದ್ರ ಸಚಿವ ಹರ್‌ಸಿಮ್ರತ್ ಕೌರ್ ಅವರು ಪಕ್ಕದಲ್ಲಿ ಕುಳಿತಿದ್ದರು.

ನಭಾ ಎಂಬಲ್ಲಿ ಪಂಜಾಬಿ ಗಾಯಕರಾದ ಹರ್‌ಭಜನ್ ಮನ್ ಮತ್ತು ರಂಜಿತ್ ಬಾವಾ ಅವರು ರೈತರ ಪ್ರತಿಭಟನೆಗೆ ಜೊತೆಯಾದರು. ಅಮೃತಸರದಲ್ಲಿ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ ಬ್ಯಾನರ್‌ನಡಿ ಮಹಿಳೆಯರು ಮೆರವಣಿಗೆ ನಡೆಸಿದರು.ಬರ್ನಾಲಾದಲ್ಲಿ ಪ್ರತಿಭಟನಕಾರರು ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಹರಿಯಾಣದಲ್ಲಿ ರೋಹ್ಟಕ್–ಜಗ್ಗರ್ ರಸ್ತೆಯನ್ನು ಬಂದ್‌ ಮಾಡಲಾಗಿತ್ತು. ಯಮುನಾನಗರ, ರೇವರಿ ಸೇರಿದಂತೆ ಹಲವೆಡೆ ರೈತರು ಪ್ರತಿಭಟನೆ ಡೆಸಿದರು.

ರೈತರಿಗೆ ತಡೆ: ಉತ್ತರ ಪ್ರದೇಶದ ನೋಯ್ಡಾದಿಂದ ದೆಹಲಿಗೆ ಮೆರವಣಿಗೆ ಹೊರಟಿದ್ದ ನೂರಾರು ರೈತರಿಗೆ ರಾಜ್ಯದ ಗಡಿಯಲ್ಲಿ ಪೊಲೀಸರು ತಡೆ ಒಡ್ಡಿದರು. ಕಾಲ್ನಡಿಗೆ, ಬೈಕ್‌ಗಳಲ್ಲಿ ಹಾಗೂ ಟ್ರ್ಯಾಕ್ಟರ್‌ಗಳಲ್ಲಿ ರೈತರು ಜಾಥಾ ನಡೆಸುತ್ತಿದ್ದರು. ಹೀಗಾಗಿ ನೊಯ್ಡಾ–ದೆಹಲಿ ಗಡಿಯಲ್ಲಿ ಬೃಹತ್ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು.

ಬಂಗಾಳದಲ್ಲಿ ಪ್ರತಿಭಟನೆ: ಮಸೂದೆಗಳನ್ನು ವಿರೋಧಿಸಿ ಎಡಪಕ್ಷಗಳಿಗೆ ಸೇರಿದ ರೈತ ಸಂಘಟನೆಗಳು ಶುಕ್ರವಾರ ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಸಿದವು. ಸಾರಾ ಭಾರತ್ ಕೃಷಿಕ್ ಸಭಾದ ಸದಸ್ಯರು ಜಾಥಾ ನಡೆಸಿ ರಸ್ತೆಗಳನ್ನು ಬಂದ್ ಮಾಡಿದರು. ಹೂಗ್ಲಿ, ಮುರ್ಷಿದಾಬಾದ್, ಉತ್ತರ 24 ಪರಗಣ, ಬಂಕುರಾ ಹಾಗೂ ನಾಡಿಯಾ ಜಿಲ್ಲೆಗಳಲ್ಲಿ ರೈತರು ಕೇಂದ್ರ ದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಕಿಸಾನ್ ಕೇತ್ ಮಜ್ದೂರ್ ಸಂಘಟನೆ ಸಹ ಗುರುವಾರ ಹಾಗೂ ಶುಕ್ರವಾರ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿತು. ಪ್ರಧಾನಿ ಪ್ರತಿಕೃತಿಯನ್ನು ದಹಿಸಲಾಯಿತು.

ರೈತರಿಗೆ ತೊಂದರೆಯಾಗದು: ಸಚಿವ
ಕೃಷಿ ಮಸೂದೆಗಳು ರೈತರ ಮೇಲೆ ಯಾವುದೇ ಅಡ್ಡ ಪರಿಣಾಮ ಉಂಟು ಮಾಡುವುದಿಲ್ಲ ಎಂದು ತಮಿಳುನಾಡಿನ ಕೃಷಿ ಸಚಿವ ಆರ್. ದೊರೈಕಣ್ಣು ಹೇಳಿದ್ದಾರೆ.

ಕಾಂಗ್ರೆಸ್, ಡಿಎಂಕೆ ಪಕ್ಷಗಳೂ ಸೇರಿದಂತೆ ಮಸೂದೆಗಳನ್ನು ವಿರೋಧಿಸಿ ತಮಿಳುನಾಡಿನಾದ್ಯಂತ ರೈತ ಸಂಘಟನೆಗಳು ಶುಕ್ರವಾರ ಪ್ರತಿಭಟನೆ ನಡೆಸಿದವು. ಮಸೂದೆಗಳನ್ನು ಸರ್ಕಾರ ಬೆಂಬಲಿಸಿರುವುದನ್ನು ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಟೀಕಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವರು, ರೈತರ ಹಿತಕ್ಕೆ ಮಾರಕವಾದ ಯಾವುದೇ ಕಾಯ್ದೆಗಳನ್ನು ಜಾರಿಯಾಗಲು ಬಿಡುವುದಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.