ADVERTISEMENT

ಕಾರಿನ ಸನ್‌ರೂಫ್ ಮೇಲೆ ಕುಳಿತು ಪ್ರಯಾಣ; ಸಂಚಾರ ನಿಯಮ ಉಲ್ಲಂಘಿಸಿದ ಪಂಜಾಬ್ ಸಚಿವ

ಪಿಟಿಐ
Published 10 ಜೂನ್ 2022, 16:35 IST
Last Updated 10 ಜೂನ್ 2022, 16:35 IST
ಸನ್‌ರೂಫ್‌ ಮೇಲೆ ಕುಳಿತಿರುವ ಸಚಿವ ಲಾಲ್‌ಜಿತ್‌ ಸಿಂಗ್‌ ಭುಲ್ಲರ್‌
ಸನ್‌ರೂಫ್‌ ಮೇಲೆ ಕುಳಿತಿರುವ ಸಚಿವ ಲಾಲ್‌ಜಿತ್‌ ಸಿಂಗ್‌ ಭುಲ್ಲರ್‌   

ಚಂಡೀಗಡ:ಪಂಜಾಬ್ ಸಾರಿಗೆ ಸಚಿವ ಲಾಲ್‌ಜಿತ್‌ ಸಿಂಗ್‌ ಭುಲ್ಲರ್‌ ಅವರು ಕಾರಿನ ಸನ್‌ರೂಫ್‌ ಮೇಲೆ ಕುಳಿತು ಸಂಚರಿಸಿರುವ ವಿಡಿಯೊವೊಂದು ವೈರಲ್‌ ಆಗಿದೆ.

ವಿರೋಧ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಅಕಾಲಿ ದಳ, ಭುಲ್ಲರ್‌ ವಿರುದ್ಧ ಕಿಡಿಕಾರಿವೆ. ಮುಖ್ಯಮಂತ್ರಿ ಭಗವಂತ ಮಾನ್‌ ಅವರು ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿವೆ.

ವೈರಲ್‌ ಆಗಿರುವ 28 ಸೆಕೆಂಡ್‌ಗಳ ವಿಡಿಯೊದಲ್ಲಿ ಸಚಿವರ ಬೆಂಗಾವಲು ಸಿಬ್ಬಂದಿ ಸಹ ಕಾರಿನ ಕಿಟಕಿ ಮೇಲೆ ಕುಳಿತು ಸಂಚರಿಸುತ್ತಿರುವುದು ಸೆರೆಯಾಗಿದೆ. ವಿಡಿಯೊ ಹಿನ್ನೆಲೆಯಲ್ಲಿ ಪಂಜಾಬಿ ಹಾಡು ಕೇಳುತ್ತದೆ.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಭುಲ್ಲರ್‌, ಇದು ಎರಡು ತಿಂಗಳು ಹಿಂದಿನ ವಿಡಿಯೊ ಎಂದಿದ್ದಾರೆ.

ಭುಲ್ಲರ್‌ ಹೇಳಿಕೆಯನ್ನು ಉಲ್ಲೇಖಿಸಿ ಕಾಂಗ್ರೆಸ್‌ ನಾಯಕ ಸುಖ್‌ಪಾಲ್‌ ಸಿಂಗ್‌ ಖೈರಾ, 'ಸಾರಿಗೆ ಸಚಿವರ ವಿಡಿಯೊ ಮೂರು ತಿಂಗಳು ಹಳೆಯದು. ಅವರು ಎಎಪಿ ಅಭ್ಯರ್ಥಿಯಾಗಿ ಎರಡು ಬೆಂಗಾವಲು ವಾಹನ ಮತ್ತು 10 ಗನ್‌ಮೆನ್‌ಗಳನ್ನು ಹೊಂದಲು ಹೇಗೆ ಸಾಧ್ಯ?' ಎಂದು ಪ್ರಶ್ನಿಸಿದ್ದಾರೆ.

'ಅರವಿಂದ್ ಕೇಜ್ರಿವಾಲ್ (ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ) ಮತ್ತು ಭಗವಂತ್ ಮಾನ್ ವಿಐಪಿ ಸಂಸ್ಕೃತಿಯನ್ನು ಕೊನೆಗೊಳಿಸಲು ಉದ್ದೇಶಿಸಿದ್ದು ಹೀಗೆಯೇ? ಜನ ಸಾಮಾನ್ಯರು ಹೀಗೆ ವರ್ತಿಸುತ್ತಾರಾ? ಇದು ಮೋಟಾರು ವಾಹನ ಕಾಯ್ದೆಯ ಸೆಕ್ಷನ್‌ 841ರ ಸ್ಪಷ್ಟ ಉಲ್ಲಂಘನೆಯಾಗಿದೆ' ಎಂದು ಆರೋಪಿದ್ದಾರೆ.

ಪಂಜಾಬ್‌ ಲೋಕ ಕಾಂಗ್ರೆಸ್‌ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಅವರು, ಪಂಜಾಬ್‌ ಸಾರಿಗೆ ಸಚಿವರು ಸಂಚಾರ ನೀತಿ, ನಿಯಮಗಳನ್ನುಸಾರ್ವಜನಿಕವಾಗಿ ಉಲ್ಲಂಘಿಸಿದ್ದಾರೆ ಎಂದು ಕಿಡಿಕಾರಿದ್ದಾರೆ. ಹಾಗೆಯೇ, ಸಚಿವರೇ ಹೀಗೆ ವರ್ತಿಸಿದರೆ, ನಿಯಮಗಳನ್ನು ಪಾಲಿಸುವಂತೆ ಅವರು ನಾಗರಿಕರಿಗೆ ಹೇಳಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.