ADVERTISEMENT

ಉತ್ತರಾಖಂಡ: ನೂತನ ಮುಖ್ಯಮಂತ್ರಿಯಾಗಿ ಪುಷ್ಕರ್ ಸಿಂಗ್ ಧಾಮಿ ಅಧಿಕಾರ ಸ್ವೀಕಾರ

ಪಿಟಿಐ
Published 4 ಜುಲೈ 2021, 12:49 IST
Last Updated 4 ಜುಲೈ 2021, 12:49 IST
ಪುಷ್ಕರ್ ಸಿಂಗ್ ಧಾಮಿ (ಪಿಟಿಐ ಚಿತ್ರ)
ಪುಷ್ಕರ್ ಸಿಂಗ್ ಧಾಮಿ (ಪಿಟಿಐ ಚಿತ್ರ)   

ಡೆಹ್ರಾಡೂನ್‌: ಉತ್ತಾರಂಖಡದ ಹನ್ನೊಂದನೇ ಮುಖ್ಯಮಂತ್ರಿಯಾಗಿ ಪುಷ್ಕರ್ ಸಿಂಗ್ ಧಾಮಿ ಭಾನುವಾರ ಅಧಿಕಾರ ಸ್ವೀಕರಿಸಿದರು. ಇವರ ಜತೆ ಹತ್ತು ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲೆ ಬೇಬಿ ರಾಣಿ ಮೌರ್ಯ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಪಕ್ಷದ ಶಾಸಕರು, ಸರ್ಕಾರದ ಹಿರಿಯ ಅಧಿಕಾರಿಗಳು ಹಾಜರಿದ್ದರು.

45 ವರ್ಷದ ಪುಷ್ಕರ್ ಸಿಂಗ್ ಧಾಮಿ ಉತ್ತರಾಖಂಡದ ಅತಿ ಕಿರಿಯ ವಯಸ್ಸಿನ ಮುಖ್ಯಮಂತ್ರಿಯಾಗಿದ್ದಾರೆ.

ವಿಧಾನಸಭೆಯಲ್ಲಿ ಖಾತಿಮಾ ಕ್ಷೇತ್ರವನ್ನು ಪ್ರತಿನಿಧಿಸುವ ಧಾಮಿ ಅವರು ವಿದ್ಯಾರ್ಥಿಯಾಗಿದ್ದಾಗ ಎಬಿವಿಪಿ ಜೊತೆಗೆ ಗುರುತಿಸಿಕೊಂಡಿದ್ದು, ಉತ್ತರಾಖಂಡದ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

ಧಾಮಿ ಅವರು ಶಾಸಕಾಂಗ ಪಕ್ಷದ ನಾಯಕನಾಗಿ ಶನಿವಾರ ಆಯ್ಕೆಯಾಗಿದ್ದರು. ಅವರು ಮಹಾರಾಷ್ಟ್ರದ ಹಾಲಿ ರಾಜ್ಯಪಾಲ ಭಗತ್‌ ಸಿಂಗ್ ಕೋಶಿಯಾರಿ ಅವರ ಆಪ್ತರು ಎಂದು ಹೇಳಲಾಗಿದೆ.

ರಾಜ್ಯ ವಿಧಾನಸಭೆಗೆ ನಿಗದಿತ ಅವಧಿಯಲ್ಲಿ ನಿಯಮಾನುಸಾರ ಆಯ್ಕೆಯಾಗದ ಕಾರಣ ಹಿಂದಿನ ಮುಖ್ಯಮಂತ್ರಿ ತೀರತ್‌ ಸಿಂಗ್‌ ರಾವತ್‌ ಅವರು ಶುಕ್ರವಾರ ರಾಜೀನಾಮೆಯನ್ನು ಸಲ್ಲಿಸಿದ್ದರು. ಹೀಗಾಗಿ ಬಿಜೆಪಿಯು ಶಾಸಕಾಂಗ ಪಕ್ಷದ ನೂತನ ನಾಯಕನನ್ನು ಆರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.