ADVERTISEMENT

ಬ್ರಿಟನ್‌ ರಾಣಿ 2ನೇ ಎಲಿಜಬೆತ್‌ ನಿಧನದಿಂದ ನೋವಾಗಿದೆ: ಪ್ರಧಾನಿ ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಸೆಪ್ಟೆಂಬರ್ 2022, 4:55 IST
Last Updated 9 ಸೆಪ್ಟೆಂಬರ್ 2022, 4:55 IST
ಬ್ರಿಟನ್‌ನ ರಾಣಿ 2ನೇ ಎಲಿಜಬೆತ್ ಜತೆ ಪ್ರಧಾನಿ ನರೇಂದ್ರ ಮೋದಿ (ಕೃಪೆ – ಪ್ರಧಾನಿ ಮೋದಿ ಟ್ವೀಟ್ ಮಾಡಿರುವ ಸಂಗ್ರಹ ಚಿತ್ರ)
ಬ್ರಿಟನ್‌ನ ರಾಣಿ 2ನೇ ಎಲಿಜಬೆತ್ ಜತೆ ಪ್ರಧಾನಿ ನರೇಂದ್ರ ಮೋದಿ (ಕೃಪೆ – ಪ್ರಧಾನಿ ಮೋದಿ ಟ್ವೀಟ್ ಮಾಡಿರುವ ಸಂಗ್ರಹ ಚಿತ್ರ)   

ನವದೆಹಲಿ: ಬ್ರಿಟನ್‌ನ ರಾಣಿ 2ನೇ ಎಲಿಜಬೆತ್ ನಿಧನದಿಂದ ತೀವ್ರ ನೋವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

‘ಬ್ರಿಟನ್‌ನ ರಾಣಿ 2ನೇ ಎಲಿಜಬೆತ್ ನಮ್ಮ ಕಾಲದ ಧೀಮಂತ ನಾಯಕಿಯಾಗಿ ಸದಾ ನೆನಪಿನಲ್ಲುಳಿಯಲಿದ್ದಾರೆ. ಅವರು ತಮ್ಮ ದೇಶದ ಜನರಿಗೆ ಸ್ಫೂರ್ತಿದಾಯಕ ನಾಯಕತ್ವವನ್ನು ನೀಡಿದ್ದರು. ಸಾರ್ವಜನಿಕ ಜೀವನದಲ್ಲಿ ಘನತೆ ಮತ್ತು ಸಭ್ಯತೆಯಿಂದ ಇದ್ದವರು. ಅವರ ಕುಟುಂಬದ ಮತ್ತು ಬ್ರಿಟನ್‌ ಜನರ ಈ ದುಃಖದಲ್ಲಿ ನಾವೂ ಭಾಗಿಯಾಗಿದ್ದೇವೆ, ಅವರ ಜತೆ ನಾವಿದ್ದೇವೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

‘2015 ಮತ್ತು 2018ರಲ್ಲಿ ಬ್ರಿಟನ್‌ಗೆ ಭೇಟಿ ನೀಡಿದ್ದಾಗ ರಾಣಿ 2ನೇ ಎಲಿಜಬೆತ್ ಜತೆ ಮಾತುಕತೆ ನಡೆಸಿರುವುದು ಸ್ಮರಣೀಯವಾಗಿದೆ. ಅವರ ಸ್ವಾಗತ ಮತ್ತು ದಯಾಪರತೆಯನ್ನು ಎಂದಿಗೂ ಮರೆಯಲಾರೆ. ಮಹಾತ್ಮ ಗಾಂಧಿಯವರು ಮದುವೆಗೆ ಉಡುಗೊರೆಯಾಗಿ ನೀಡಿದ್ದ ಕರವಸ್ತ್ರವನ್ನು ಸಭೆಯೊಂದರ ವೇಳೆ ಅವರು ನನಗೆ ತೋರಿಸಿದ್ದರು’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಬ್ರಿಟಿಷ್‌ ಇತಿಹಾಸದಲ್ಲಿಯೇ ಸುದೀರ್ಘ ಕಾಲ ರಾಣಿಯಾಗಿದ್ದ, 96 ವರ್ಷ ವಯಸ್ಸಿನ 2ನೇ ಎಲಿಜಬೆತ್ ಗುರುವಾರ ರಾತ್ರಿ ನಿಧನರಾಗಿದ್ದಾರೆ. ಎಲಿಜಬೆತ್ ಅವರು ಬುಧವಾರವಷ್ಟೇ ಬ್ರಿಟನ್‌ನ 15ನೇ ಪ್ರಧಾನಿಯಾಗಿ ಲಿಜ್‌ ಟ್ರಸ್‌ ಅವರನ್ನು ನೇಮಿಸಿದ್ದರು.

ರಾಣಿ 2ನೇ ಎಲಿಜಬೆತ್ ನಿಧನಕ್ಕೆ ಕೇಂದ್ರ ಸಚಿವ ಪೀಯೂಷ್ ಗೋಯಲ್, ಹರ್ದೀಪ್‌ ಸಿಂಗ್ ಪುರಿ ಸಾಮಾಜಿಕ ಮಾಧ್ಯಮ ‘ಕೂ’ ಮೂಲಕ ಸಂತಾಪ ಸೂಚಿಸಿದ್ದಾರೆ.ರಾಣಿ 2ನೇ ಎಲಿಜಬೆತ್ ಅವರುಏಳು ದಶಕಗಳ ಕಾಲ ಬ್ರಿಟನ್ ಅನ್ನು ಆಳಿದಧೀಮಂತ ಮಹಿಳೆ. ಅವರು ಬ್ರಿಟನ್‌ನಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ರಾಣಿಯಾಗಿದ್ದರು. ಅವರ ಅಗಲುವಿಕೆಯೊಂದಿಗೆ ಯುಗವೊಂದು ಅಂತ್ಯವಾದಂತಾಗಿದೆ. ಬ್ರಿಟನ್ ಜನತೆಗೆ ನನ್ನ ಸಂತಾಪಗಳು ಎಂದುಹರ್ದೀಪ್‌ ಸಿಂಗ್ ಪುರಿ ಉಲ್ಲೇಖಿಸಿದ್ದಾರೆ.ರಾಣಿ 2ನೇ ಎಲಿಜಬೆತ್ ನಿಧನದಿಂದ ಇಂಗ್ಲೆಂಡಿನ ಜನರಿಗೆ ಮತ್ತು ನಮ್ಮೆಲ್ಲರಿಗೂ ಅಪಾರ ನಷ್ಟವಾಗಿದೆ ಎಂದುಪೀಯೂಷ್ ಗೋಯಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.