ADVERTISEMENT

ಕುನೊ ರಾಷ್ಟ್ರೀಯ ಉದ್ಯಾನ: ಚೀತಾಗಳಿಗೆ ಅಳವಡಿಸಿದ್ದ ರೇಡಿಯೊ ಕಾಲರ್ ತೆಗೆದ ವೈದ್ಯರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಜುಲೈ 2023, 9:16 IST
Last Updated 24 ಜುಲೈ 2023, 9:16 IST
   

ಶಿವಪುರ (ಮಧ್ಯಪ್ರದೇಶ): ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿರುವ ಆರು ಚೀತಾಗಳಿಗೆ ಅಳವಡಿಸಿದ್ದ ರೇಡಿಯೊ ಕಾಲರ್ ಅನ್ನು ಆರೋಗ್ಯ ಪರೀಕ್ಷೆಗಾಗಿ ತೆಗೆಯಲಾಗಿದೆ ಎಂದು ಕೆಎನ್‌ಪಿಯ ಪಶುವೈದ್ಯರು ಮತ್ತು ನಮೀಬಿಯಾ, ದಕ್ಷಿಣ ಆಫ್ರಿಕಾದ ತಜ್ಞರು ತಿಳಿಸಿದ್ದಾರೆ.

ಈ ಸಿವಂಗಿಗಳ ಚಲನವಲನ ಕುರಿತ ಅಧ್ಯಯನಕ್ಕೆ ಕೊರಳಿಗೆ ತೊಡಿಸಿದ್ದ ರೇಡಿಯೊ ಕಾಲರ್‌ ಅವುಗಳಿಗೆ ಮೃತ್ಯುವಾಗಿ ಪರಿಣಮಿಸಿದೆ ಎಂದು ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಚೀತಾಗಳ ಕೊರಳಿಗೆ ತೊಡಿಸಿದ್ದ ರೇಡಿಯೊ ಕಾಲರ್‌ ತೆಗೆದು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರೇಡಿಯೊ ಕಾಲರ್‌ಗಳನ್ನು ತೆಗೆದಿರುವ ಚೀತಾಗಳನ್ನು ಗೌರವ್, ಶೌರ್ಯ, ಪವನ್, ಪಾವಕ್, ಆಶಾ ಮತ್ತು ಧೀರಾ ಎಂದು ಗುರುತಿಸಲಾಗಿದೆ. ಇವುಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಿದ್ದಾರೆ.

ADVERTISEMENT

ಕಳೆದ ಮಾರ್ಚ್‌ನಲ್ಲಿ ಶಿವಪುರ ಜಿಲ್ಲೆಯ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಐದು ವಯಸ್ಕ ಚೀತಾಗಳು ಮತ್ತು ಮೂರು ಮರಿಗಳು ಸಾವನ್ನಪ್ಪಿವೆ.

ದಕ್ಷಿಣ ಆಫ್ರಿಕಾದಿಂದ ತಂದಿದ್ದ ‘ತೇಜಸ್‌’ ಹಾಗೂ ‘ಸೂರಜ್’ ಹೆಸರಿನ ಚೀತಾಗಳು ಒಂದು ವಾರದ ಅವಧಿಯಲ್ಲಿ ಮೃತಪಟ್ಟಿದ್ದವು. ಇವುಗಳ ಸಾವಿನೊಂದಿಗೆ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಉದ್ಯಾನದಲ್ಲಿ ಮೃತಪಟ್ಟ ಚೀತಾಗಳ ಸಂಖ್ಯೆ 8ಕ್ಕೇರಿತ್ತು. ಇದು ಭಾರತದಲ್ಲಿ ಅವುಗಳ ಸಂತತಿ ಪುನರುತ್ಥಾನ ಯೋಜನೆ ಬಗ್ಗೆ ಹಲವು ಪ್ರಶ್ನೆಗಳನ್ನು ಮುಂದಿಟ್ಟಿತ್ತು.

ಇತ್ತೀಚೆಗೆ ಮೃತಪಟ್ಟಿದ್ದ ಎರಡು ಗಂಡು ಚೀತಾಗಳ ಸಾವಿಗೆ ರಕ್ತದ ನಂಜು (ಸೆಪ್ಟಿಸೇಮಿಯಾ) ಕಾರಣವಾಗಿರುವ ಸಂಗತಿ ಬಯಲಾಗಿತ್ತು.

ಸದ್ಯ ಆರು ಗಂಡು, ಐದು ಹೆಣ್ಣು ಸೇರಿ ಒಟ್ಟು 11 ಚೀತಾಗಳು ಕುನೊ ರಾಷ್ಟ್ರೀಯ ಉದ್ಯಾನದಲ್ಲಿವೆ.

ಓದಿ... ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನ: ಚೀತಾಗೆ ಮೃತ್ಯುವಾದ ರೇಡಿಯೊ ಕಾಲರ್!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.