ADVERTISEMENT

26 ರಫೆಲ್‌–ಎಂ ಜೆಟ್ ಖರೀದಿ: ₹64 ಸಾವಿರ ಕೋಟಿ ಒಪ್ಪಂದಕ್ಕೆ ಭಾರತ – ಫ್ರಾನ್ಸ್ ಸಹಿ

ಪಿಟಿಐ
Published 28 ಏಪ್ರಿಲ್ 2025, 11:11 IST
Last Updated 28 ಏಪ್ರಿಲ್ 2025, 11:11 IST
<div class="paragraphs"><p>ರಫೆಲ್‌ ಯುದ್ಧ ವಿಮಾನ</p></div>

ರಫೆಲ್‌ ಯುದ್ಧ ವಿಮಾನ

   

ರಾಯಿಟರ್ಸ್ ಚಿತ್ರ

ನವದೆಹಲಿ: ಭಾರತೀಯ ನೌಕಾಪಡೆಯ ಬಲ ಹೆಚ್ಚಿಸುವ ಉದ್ದೇಶದಿಂದ ರಫೆಲ್‌–ಎಂ 26 ಯುದ್ಧ ವಿಮಾನಗಳನ್ನು ₹64 ಸಾವಿರ ಕೋಟಿ ವೆಚ್ಚದಲ್ಲಿ ಖರೀದಿಸುವ ಒಪ್ಪಂದಕ್ಕೆ ಭಾರತವು ಫ್ರಾನ್ಸ್‌ ಜತೆಗೆ ಸೋಮವಾರ ಸಹಿ ಹಾಕಿತು.

ADVERTISEMENT

‘ಫ್ರಾನ್ಸ್‌ನ ಯುದ್ಧ ವಿಮಾನ ತಯಾರಿಕಾ ಕಂಪನಿ ಡಸಾಲ್ಟ್‌ ಏವಿಯೇಷನ್‌ ಪೂರೈಸಲಿರುವ ರಫೆಲ್ ಮರೀನ್‌ ಯುದ್ಧ ವಿಮಾನಗಳು ಸಾಗರ ಪ್ರದೇಶದಲ್ಲಿ ದಾಳಿ ನಡೆಸುವ ಸಾಮರ್ಥ್ಯ ಹೊಂದಿವೆ. ಇವುಗಳನ್ನು ದೇಶಿ ನಿರ್ಮಿತ ಐಎನ್‌ಎಸ್‌ ಯುದ್ಧ ನೌಕೆಗೆ ನಿಯೋಜಿಸಲಾಗುವುದು. ಭಾರತೀಯ ನೌಕಾಪಡೆಗೆ 2030ರೊಳಗೆ ಈ ವಿಮಾನಗಳ ಸೇರ್ಪಡೆ ಪೂರ್ಣವಾಗಲಿದೆ. ಫ್ರಾನ್ಸ್ ಮತ್ತು ಭಾರತದಲ್ಲಿ ಸಿಬ್ಬಂದಿಗೆ ತರಬೇತಿ ನೀಡಲಾಗುವುದು’ ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮತ್ತು ಫ್ರಾನ್ಸ್‌ ರಕ್ಷಣಾ ಸಚಿವ ಸೆಬಾಸ್ಟಿಯನ್ ಲೆಕೊರ್ನು ಅವರು ಒಪ್ಪಂದಕ್ಕೆ ಸಹಿ ಹಾಕಿದರು. ಸಹಿ ಮಾಡಿದ ಒಪ್ಪಂದದ ಪ್ರತಿಗಳನ್ನು ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಅವರ ಸಮ್ಮುಖದಲ್ಲಿ ಉಭಯ ರಾಷ್ಟ್ರಗಳ ಅಧಿಕಾರಿಗಳು ವಿನಿಮಯ ಮಾಡಿಕೊಂಡರು.

ಒಪ್ಪಂದದ ಪ್ರಕಾರ, ಏಕ ಆಸನದ 22 ಮತ್ತು ಎರಡು ಆಸನಗಳ ನಾಲ್ಕು ವಿಮಾನಗಳನ್ನು ಡಸಾಲ್ಟ್ ಏವಿಯೇಷನ್ ಪೂರೈಸ ಲಿದೆ.2028ರ ವೇಳೆಗೆ ವಿಮಾನಗಳನ್ನು ನೀಡುವ ಪ್ರಕ್ರಿಯೆ ಪ್ರಾರಂಭವಾಗಲಿದೆ.

ಒಪ್ಪಂದವು ತರಬೇತಿ, ಸಿಮ್ಯು ಲೇಟರ್‌, ಸಂಬಂಧಿತ ಉಪಕರಣಗಳು, ಶಸ್ತ್ರಾಸ್ತ್ರಗಳು ಮತ್ತು ಕಾರ್ಯಕ್ಷಮತೆ ಆಧರಿತ ಮೂಲಸೌಕರ್ಯಗಳನ್ನು ಒಳಗೊಂಡಿರಲಿದೆ. ಅಲ್ಲದೆ, ಈಗ ಭಾರತೀಯ ವಾಯುಪಡೆಯಲ್ಲಿ ಬಳಕೆಯಲ್ಲಿರುವ ರಫೆಲ್‌ ವಿಮಾನಗಳಿಗೆ ಹೆಚ್ಚುವರಿ ಯುದ್ಧೋಪಕರಣಗಳನ್ನು
ಅಳವಡಿಸುವುದು, ಗೋಚರ ವ್ಯಾಪ್ತಿ ಮೀರಿದ ಕ್ಷಿಪಣಿ ಅಸ್ತ್ರದಂತಹ ದೇಶಿ ನಿರ್ಮಿತ ಶಸ್ತ್ರಾಸ್ತ್ರಗಳನ್ನು ರಫೆಲ್‌ ವಿಮಾನಗಳಿಗೆ ಅಳವಡಿಸುವ ನಿಬಂಧನೆಗಳನ್ನು ಹೊಂದಿದೆ.

ರಫೆಲ್‌–ಎಂ ವಿಮಾನಗಳು ಸಮುದ್ರದಲ್ಲಿ ರಾಷ್ಟ್ರದ ವಾಯು ಶಕ್ತಿಯನ್ನು ಗಣನೀಯವಾಗಿ ಹೆಚ್ಚಿಸಲಿದೆ. ಈ ವಿಮಾನಗಳ ಸೇರ್ಪಡೆಯು ಭಾರತೀಯ ನೌಕಾಪಡೆಯ ವಿಮಾನವಾಹಕ ನೌಕೆಗಳ ಶಕ್ತಿಯನ್ನೂ ದ್ವಿಗುಣಗೊಳಿಸಲಿದೆ.

‌ರಫೆಲ್‌ ಯುದ್ಧ ವಿಮಾನಗಳ ಖರೀದಿಗೆ ಮೂರು ವಾರಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯ ಸಂಪುಟದ ಭದ್ರತಾ ಸಮಿತಿ ಒಪ್ಪಿಗೆ ನೀಡಿತ್ತು. 2023ರ ಜುಲೈನಲ್ಲಿ, ರಕ್ಷಣಾ ಸಚಿವಾಲಯವು ಈ ಒಪ್ಪಂದಕ್ಕೆ ಆರಂಭಿಕ ಅನುಮೋದನೆಯನ್ನು ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.