ADVERTISEMENT

ರಾಹುಲ್‌ ಗಾಂಧಿ ಕಾರ್ಯಕ್ರಮಕ್ಕೆ ವಯನಾಡ್‌ ಜಿಲ್ಲಾಡಳಿತ ತಡೆ

ಆನ್‌ಲೈನ್‌ ಮುಖಾಂತರ ನಡೆಯಬೇಕಿದ್ದ ಶಾಲಾ ಕಟ್ಟಡ ಉದ್ಘಾಟನೆ

ಪಿಟಿಐ
Published 15 ಅಕ್ಟೋಬರ್ 2020, 16:45 IST
Last Updated 15 ಅಕ್ಟೋಬರ್ 2020, 16:45 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ವಯನಾಡ್‌: ಪೂರ್ವಾನುಮತಿ ಪಡೆದಿಲ್ಲ ಎನ್ನುವ ಕಾರಣಕ್ಕೆ ಸಂಸದ ರಾಹುಲ್‌ ಗಾಂಧಿ ಅವರು ಉದ್ಘಾಟಿಸಬೇಕಿದ್ದ ಶಾಲೆಯೊಂದರ ಉದ್ಘಾಟನಾ ಕಾರ್ಯಕ್ರಮಕ್ಕೆ ವಯನಾಡ್‌ ಜಿಲ್ಲಾಡಳಿತವು ಒಪ್ಪಿಗೆ ನೀಡಿಲ್ಲ ಎಂದು ಕಾಂಗ್ರೆಸ್‌ ಗುರುವಾರ ಆರೋಪಿಸಿದೆ.

ಗುರುವಾರ ಬೆಳಗ್ಗೆ ಮುಂದೇರಿಯಲ್ಲಿ ಸರ್ಕಾರಿ ಪಿಯು ಕಾಲೇಜಿನ 12ನೇ ತರಗತಿಯ ಹೊಸ ಕಟ್ಟಡವನ್ನು ವಯನಾಡ್‌ ಸಂಸದ ರಾಹುಲ್‌ ಗಾಂಧಿ ಅವರು ಆನ್‌ಲೈನ್‌ ಮುಖಾಂತರ ಉದ್ಘಾಟಿಸಬೇಕಿತ್ತು. ಜಿಲ್ಲಾಡಳಿತವು ಈ ಕಾರ್ಯಕ್ರಮಕ್ಕೆ ಒಪ್ಪಿಗೆ ನೀಡದೇ ಇದ್ದ ಕಾರಣ ಕಾರ್ಯಕ್ರಮವನ್ನೇ ರದ್ದುಗೊಳಿಸಲಾಯಿತು. ಇದು ರಾಜಕೀಯ ಪ್ರೇರಿತ ಪಿತೂರಿ ಎಂದು ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷ ಐ.ಸಿ.ಬಾಲಕೃಷ್ಣನ್‌ ಅವರು ಆರೋಪಿಸಿದರು.

ನಿರ್ಮಿತಿ ಕೇಂದ್ರವು ಬಹುವಲಯ ಅಭಿವೃದ್ಧಿ ಯೋಜನೆಯಡಿ(ಎಂಎಸ್‌ಡಿಪಿ) ಈ ಕಟ್ಟಡವನ್ನು ₹1.2 ಕೋಟಿ ವೆಚ್ಚದಲ್ಲಿ ನಿರ್ಮಿಸಿದೆ. ‘ಎಂಎಸ್‌ಡಿಪಿಯು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಜಾರಿಗೊಂಡ ಯೋಜನೆಯಾಗಿದೆ. ಇದರಲ್ಲಿ ಶೇ 60 ಕೇಂದ್ರದ ಅನುದಾನ ಹಾಗೂ ಉಳಿದ ಶೇ 40 ರಾಜ್ಯದ ಅನುದಾನವಿದೆ. ಹೀಗಾಗಿ ರಾಜ್ಯ ಸರ್ಕಾರದ ಅನುಮತಿ ಪಡೆದೇ ಈ ಕಾರ್ಯಕ್ರಮವನ್ನು ಆಯೋಜಿಸಬೇಕಿತ್ತು’ ಎಂದು ಕಲ್ಪೆಟ್ಟ ಶಾಸಕ, ಸಿಪಿಐಎಂ ನಾಯಕ ಸಿ.ಕೆ ಶಶೀಂದ್ರನ್‌ ತಿಳಿಸಿದರು.

ADVERTISEMENT

‘ಈ ಕಾರ್ಯಕ್ರಮವನ್ನು ರದ್ದುಗೊಳಿಸಿಲ್ಲ. ಬದಲಾಗಿ, ಇನ್ನೊಂದು ದಿನ ನಡೆಸಲು ತಿಳಿಸಲಾಗಿದೆ. ಉದ್ಘಾಟನಾ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಆಯೋಜಕರು ನನ್ನ ಹೆಸರು ಹಾಕಿದ್ದರು. ರಾಜ್ಯ ಸರ್ಕಾರದ ಪೂರ್ವಾನುಮತಿ ಇಲ್ಲದ ಕಾರಣ ಜಿಲ್ಲಾಧಿಕಾರಿ ಕಾರ್ಯಕ್ರಮ ರದ್ದುಗೊಳಿಸಲು ಸೂಚಿಸಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.