
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಕೊಯಮತ್ತೂರು (ತಮಿಳುನಾಡು): ಕೇಂದ್ರದಲ್ಲಿರುವುದು ಪ್ರಧಾನಿ ನರೇಂದ್ರ ಮೋದಿ ಸರ್ಕಾರವಲ್ಲ, ಅದಾನಿ ಸರ್ಕಾರ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟವು ಗೆಲುವು ಸಾಧಿಸುವ ಮೂಲಕ ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಕೊನೆಗೊಳ್ಳಲಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ತಮಿಳುನಾಡಿನಲ್ಲಿ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನರೇಂದ್ರ ಮೋದಿ ಮತ್ತು ಅದಾನಿ ಅವರ ನೀತಿಗಳು ಕೋಟ್ಯಾಧಿಪತಿಗಳ ಭಾರತ ಮತ್ತು ಬಡವರ ಭಾರತ ಎಂಬ ಎರಡು ವಿಭಾಗವನ್ನು ದೇಶದಲ್ಲಿ ಸೃಷ್ಟಿಸಿವೆ. ಪ್ರಧಾನಿ ಮೋದಿ ಅವರ ಸರ್ಕಾರ ಅದಾನಿ ಸರ್ಕಾರವಾಗಿದೆ. ಆದ್ದರಿಂದ, ಅದನ್ನು ಅದಾನಿ ಸರ್ಕಾರ ಎಂದು ಕರೆಯಬೇಕೆ ಹೊರತು ಮೋದಿ ಸರ್ಕಾರ ಎಂದಲ್ಲ’ ಎಂದು ಕಿಡಿಕಾರಿದ್ದಾರೆ.
‘ವಿಮಾನ ನಿಲ್ದಾಣ, ಹೆದ್ದಾರಿ, ಇತರೆ ಯಾವುದೇ ಮೂಲಭೂತ ಯೋಜನೆಗಳಾಗಲಿ, ಅದನ್ನು ಕೇಂದ್ರ ಸರ್ಕಾರ ಅದಾನಿಗೆ ಅವರಿಗೆ ನೀಡುತ್ತದೆ. ಅಲ್ಲದೆ, ಸಂಸತ್ತಿನಲ್ಲಿ ಅದಾನಿ ವಿಷಯವನ್ನು ಪ್ರಸ್ತಾಪಿಸಿದ ಫಲವಾಗಿ ನನ್ನ (ರಾಹುಲ್ ಗಾಂಧಿ) ಲೋಕಸಭಾ ಸದಸ್ಯತ್ವವನ್ನು ಸರ್ಕಾರ ಕಸಿದುಕೊಂಡಿತು. ದೇಶದ ಬಡ ಜನರಿಗೆ ಮೋದಿ ಸರ್ಕಾರ ಏನನ್ನೂ ಮಾಡಿಲ್ಲ’ ಎಂದು ಹೇಳಿದ್ದಾರೆ.
‘ಸಂವಿಧಾನವು ಸಾಮಾನ್ಯ ಪುಸ್ತಕವಲ್ಲ, ಅದು ದೇಶದ ಜನರ ಆತ್ಮ ಹಾಗೂ ಧ್ವನಿಯಾಗಿದೆ. ಆ ಆತ್ಮ ಮತ್ತು ಧ್ವನಿಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್‌ಎಸ್‌ಎಸ್ ಆಕ್ರಮಣ ಮಾಡುತ್ತಿವೆ. ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಾಯಿಸಲಾಗುವುದು ಎಂದು ಬಿಜೆಪಿ ಪಕ್ಷದ ಸಂಸದರೇ ಬಹಿರಂಗವಾಗಿ ಹೇಳಿದ್ದಾರೆ’ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.