ADVERTISEMENT

ಚನ್ನಿ ಸಿಎಂ ಅಭ್ಯರ್ಥಿಯೆಂದು ರಾಹುಲ್‌ ಘೋಷಿಸಿದ್ದು ಯಾವ ಅರ್ಹತೆಯಿಂದ?: ಸಿಬಲ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಮಾರ್ಚ್ 2022, 4:27 IST
Last Updated 15 ಮಾರ್ಚ್ 2022, 4:27 IST
ಕಪಿಲ್‌ ಸಿಬಲ್‌ (ಪಿಟಿಐ ಚಿತ್ರ)
ಕಪಿಲ್‌ ಸಿಬಲ್‌ (ಪಿಟಿಐ ಚಿತ್ರ)   

ನವದೆಹಲಿ: ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯ ಸೋಲನುಭವಿಸಿದ ಬಳಿಕ ಪಕ್ಷದ ನಾಯಕತ್ವದ ಬಗ್ಗೆ ಹಿರಿಯ ಮುಖಂಡ ಕಪಿಲ್‌ ಸಿಬಲ್‌ ಅಸಮಾಧಾನ ತೋರಿದ್ದು, 'ಗಾಂಧಿ ಕುಟುಂಬ ಹಿಂದೆ ಸರಿದು ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು' ಎಂದು ಸಲಹೆ ನೀಡಿದ್ದಾರೆ.

ಸೋನಿಯಾ ಗಾಂಧಿ ಅವರು ಕಾಂಗ್ರೆಸ್‌ ಅಧ್ಯಕ್ಷರಾಗಿದ್ದರೂ ಪಕ್ಷದ ನಿರ್ಧಾರಗಳನ್ನು ರಾಹುಲ್‌ ಗಾಂಧಿ ತೆಗೆದುಕೊಳ್ಳುತ್ತಿರುವ ಬಗ್ಗೆ ಕಪಿಲ್‌ ಸಿಬಲ್‌ ಆಕ್ರೋಶ ಹೊರಹಾಕಿದ್ದಾರೆ. ಪಂಜಾಬ್‌ನಲ್ಲಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಲು ರಾಹುಲ್ ಗಾಂಧಿ ಅವರಿಗೆ ಯಾವ ಅರ್ಹತೆಯಿತ್ತು? ಎಂದು ಪ್ರಶ್ನಿಸಿದ್ದಾರೆ.

'ರಾಹುಲ್‌ ಗಾಂಧಿ ಅವರು ಕಾಂಗ್ರೆಸ್‌ನ ಅಧ್ಯಕ್ಷರಲ್ಲ. ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಇದ್ದಾರೆ. ಹೀಗಿರುವಾಗ ರಾಹುಲ್‌ ಗಾಂಧಿ ಪಂಜಾಬ್‌ಗೆ ಹೋಗಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿದರು. ಅವರು ಯಾವ ಅರ್ಹತೆಯಿಂದ ಈ ಘೋಷಣೆ ಮಾಡಿದರು?' ಎಂದು ಕಪಿಲ್‌ ಸಿಬಲ್‌ 'ದಿ ಇಂಡಿಯನ್‌ ಎಕ್ಸ್‌ಪ್ರೆಸ್‌'ಗೆ ನೀಡಿದ ಸಂದರ್ಶನದಲ್ಲಿ ಪ್ರಶ್ನಿಸಿದ್ದಾರೆ.

ADVERTISEMENT

'ರಾಹುಲ್‌ ಗಾಂಧಿ ಪಕ್ಷದ ಅಧ್ಯಕ್ಷರಲ್ಲ, ಹಾಗಿದ್ದರೂ ಪಕ್ಷದ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಒಂದು ರೀತಿಯಲ್ಲಿ ರಾಹುಲ್‌ ಕಾಂಗ್ರೆಸ್‌ನ ವಾಸ್ತವಿಕ ಅಧ್ಯಕ್ಷರು. ಹಾಗಿದ್ದೂ ರಾಹುಲ್‌ ಪುನಃ ಅಧ್ಯಕ್ಷರಾಗಬೇಕು ಎಂದು ಏಕೆ ಕೇಳುತ್ತಿದ್ದಾರೆ? ಅವರಿಗೆ ವಾಸ್ತವಿಕ ಅಧ್ಯಕ್ಷರು ಕಾನೂನುರೀತ್ಯಾ ಅಧ್ಯಕ್ಷರಾಗಿ ನೇಮಕಗೊಳ್ಳಬೇಕಿದೆ ಅಷ್ಟೇ. ಆದರೆ ಅದೇನು ದೊಡ್ಡ ವಿಚಾರವಲ್ಲ, ಅವರು ವಾಸ್ತವಿಕ ಅಧ್ಯಕ್ಷರೇ' ಎಂದು ಮಾರ್ಮಿಕವಾಗಿ ಕಪಿಲ್ ಸಿಬಲ್‌ ಹೇಳಿದ್ದಾರೆ.

ಐದು ರಾಜ್ಯಗಳ ವಿಧಾನ ಸಭಾ ಚುನಾವಣೆಯ ಸೋಲಿನ ಆತ್ಮಾವಲೋಕನಕ್ಕಾಗಿ ಭಾನುವಾರ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಕರೆಯಲಾಗಿತ್ತು. ಕಾಂಗ್ರೆಸ್‌ ಪಕ್ಷದ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಅವರೇ ಸದ್ಯಕ್ಕೆ ಮುಂದುವರಿಯಲಿದ್ದಾರೆ ಎಂದು ಸಿಡಬ್ಲ್ಯುಸಿ ನಿರ್ಧರಿಸಿದೆ.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌, ಕರ್ನಾಟಕ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮುಂತಾದವರು ರಾಹುಲ್‌ ಗಾಂಧಿ ಅವರು ಪುನಃ ಅಧ್ಯಕ್ಷತೆ ವಹಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.