ಅರಾರಿಯಾ: ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯು (ಎಸ್‌ಐಆರ್) ಚುನಾವಣಾ ಆಯೋಗದ ಮೂಲಕ ನಡೆಯುತ್ತಿರುವ ಸಾಂಸ್ಥಿಕ ಮತ ಕಳ್ಳತನವಾಗಿದೆ. ಈ ವಿಚಾರದಲ್ಲಿ ಆಯೋಗವು ಈಗ ಬಿಜೆಪಿಯೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಆರೋಪಿಸಿದರು.
ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಸೇರಿದಂತೆ ‘ಇಂಡಿಯಾ’ದ ಇತರ ನಾಯಕರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ರಾಹುಲ್ ‘ ಸಾರ್ವಜನಿಕ ವಲಯಗಳನ್ನು ಖಾಸಗೀಕರಣಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಈಗ ‘ಎಸ್‌ಐಆರ್’ ಮೂಲಕ ಬಡ ಜನರ ಮತವನ್ನು ಕಳವು ಮಾಡಲು ಯತ್ನಿಸುತ್ತಿದೆ’ ಎಂದು ಹೇಳಿದರು.
‘ಬಿಹಾರದಲ್ಲಿ ಮತ ಕಳ್ಳತನ ನಡೆಸಲು ನಾವು ಬಿಡುವುದಿಲ್ಲ. ಹರಿಯಾಣ, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ನಡೆದಿರುವ ಮತ ಕಳ್ಳತನವನ್ನು ನಾನು ಬಹಿರಂಗಪಡಿಸಿದಾಗ, ಚುನಾವಣಾ ಆಯೋಗವು ಪ್ರಮಾಣಪತ್ರ ಸಲ್ಲಿಸುವಂತೆ ಸೂಚಿಸಿತ್ತು. ಆದರೆ ಇದೇ ವಿಷಯದ ಬಗ್ಗೆ ಆಡಳಿತ ರೂಢ ಸರ್ಕಾರದ ಭಾಗವಾಗಿರುವ ಅನುರಾಗ್ ಠಾಕೂರ್ ಅವರು ಹೇಳಿದಾಗ, ಅವರಿಂದ ಪ್ರಮಾಣಪತ್ರ ಕೇಳಿಲ್ಲ. ಚುನಾವಣಾ ಆಯೋಗವು ತಟಸ್ಥವಾಗಿಲ್ಲ ಎಂಬುವುದಕ್ಕೆ ಇದೊಂದು ನಿದರ್ಶನವಾಗಿದೆ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.