ADVERTISEMENT

Bihar Election 2025: ಒಂದೇ ಕಲ್ಲಿನಲ್ಲಿ ಮೂರು ಹಕ್ಕಿ ಹೊಡೆದ ರಾಹುಲ್‌

ಬಿಹಾರದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಚೈತನ್ಯ ನೀಡಿದ ‘ಮತದಾರರ ಅಧಿಕಾರ ಯಾತ್ರೆ’

ಅಭಯ್ ಕುಮಾರ್
Published 1 ಸೆಪ್ಟೆಂಬರ್ 2025, 23:30 IST
Last Updated 1 ಸೆಪ್ಟೆಂಬರ್ 2025, 23:30 IST
ಪಟ್ನಾದಲ್ಲಿ ನಡೆದ ಯಾತ್ರೆಯಲ್ಲಿ ರಾಹುಲ್‌ ಗಾಂಧಿ ಮಾತನಾಡಿದರು
ಪಟ್ನಾದಲ್ಲಿ ನಡೆದ ಯಾತ್ರೆಯಲ್ಲಿ ರಾಹುಲ್‌ ಗಾಂಧಿ ಮಾತನಾಡಿದರು   

ಪಟ್ನಾ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಬಿಹಾರದಲ್ಲಿ ‘ಮತದಾರರ ಅಧಿಕಾರ ಯಾತ್ರೆ’ ನಡೆಸುವ ಮೂಲಕ ಒಂದೇ ಕಲ್ಲಿನಲ್ಲಿ ಮೂರು ಹಕ್ಕಿಗಳನ್ನು ಹೊಡೆದುರುಳಿಸಿದ್ದಾರೆ. ಅಲ್ಲದೆ, ಕಳೆದ ಮೂರು ದಶಕಗಳಲ್ಲಿ ಕಾಂಗ್ರೆಸ್‌ನ ಉನ್ನತ ನಾಯಕತ್ವದ ಅನೇಕರು ಮಾಡಲಾಗದ ಕೆಲಸವನ್ನು ಮಾಡಿದ್ದಾರೆ.

ಮತ ಕಳವು ಕುರಿತ ಆರೋಪವನ್ನು ಸಾಬೀತುಪಡಿಸಲು ಪ್ರಮಾಣಪತ್ರ ಸಲ್ಲಿಸುವಂತೆ ಚುನಾವಣಾ ಆಯೋಗವು ರಾಹುಲ್‌ ಗಾಂಧಿ ಅವರನ್ನು ಕೇಳುತ್ತಿರಬಹುದು. ಆಡಳಿತ ವ್ಯವಸ್ಥೆ ಹಾಗೂ ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ಆರೋಪ ಮಾಡಿದ್ದಕ್ಕಾಗಿ ಅವರನ್ನು ಎನ್‌ಡಿಎ ನಾಯಕರು ನಿಂದಿಸುತ್ತಿರಬಹುದು. ಆದರೆ, ಅವರ ಈ ಯಾತ್ರೆಯು ಕಾಂಗ್ರೆಸ್‌ ಪಕ್ಷದ ಪುನರುಜ್ಜೀವನಕ್ಕೆ ಅಡಿಪಾಯ ಹಾಕಿರುವುದಂತೂ ದಿಟ.

ಹದಿನೈದು ದಿನಗಳ ಯಾತ್ರೆಯು ಪ್ರಮುಖವಾಗಿ ‘ಮತ ಕಳವ’ನ್ನು ಕೇಂದ್ರೀಕೃತವಾಗಿತ್ತು ಹಾಗೂ ಬಿಜೆಪಿಯ ಹಿಂದುತ್ವ ಹಾಗೂ ಮಂದಿರ ಕಾರ್ಯಸೂಚಿಯನ್ನು ಮರೆಮಾಚಿದರು. ಬಿಹಾರದ 25 ಜಿಲ್ಲೆಗಳ 110 ವಿಧಾನಸಭಾ ಕ್ಷೇತ್ರಗಳಲ್ಲಿ 1,300 ಕಿ.ಮೀ. ಸಂಚರಿಸಿದ್ದಾರೆ. 1990ರ ಮಾರ್ಚ್‌ನಲ್ಲಿ ಅಧಿಕಾರದಿಂದ ಕೆಳಗಿಳಿದ ಬಳಿಕ ಬಿಹಾರದಲ್ಲಿ ಉಸಿರುಗಟ್ಟುವ ಸ್ಥಿತಿಯಲ್ಲಿದ್ದ ಕಾಂಗ್ರೆಸ್‌ ಪಕ್ಷಕ್ಕೆ ಹೊಸ ಚೈತನ್ಯವನ್ನು ನೀಡಿದ್ದಾರೆ.

ADVERTISEMENT

ಈ ಯಾತ್ರೆಯು ಯೋಜನಾಬದ್ಧವಾಗಿ ನಡೆದಿದ್ದು, ಎನ್‌ಡಿಎ ಹಾಗೂ ಇಂಡಿಯಾ ಮೈತ್ರಿಕೂಟದವರು ವಿಸ್ಮಯಗೊಳ್ಳುವಂತೆ ಮಾಡಿದೆ. ನವೆಂಬರ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಸೀಟು ನೀಡುವಂತೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಅವರೊಂದಿಗೆ ಚೌಕಾಸಿ ನಡೆಸಲು ಸಹಕಾರಿಯಾಗಿದೆ.

‘ರಾಹುಲ್‌ ಅವರು ಒಂದೇ ಕಲ್ಲಿನಲ್ಲಿ ಮೂರು ಹಕ್ಕಿಗಳನ್ನು ಹೊಡೆದಿದ್ದಾರೆ. ಒಂದು, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ವಿಷಯದ ಮೂಲಕ ಚುನಾವಣಾ ಆಯೋಗ ಹಾಗೂ ಬಿಜೆಪಿಯನ್ನು ಸಂಕಷ್ಟಕ್ಕೆ ಸಿಲುಕಿಸಿರುವುದು. ಎರಡು, ಗೋಸಂರಕ್ಷಣೆಯ ಸೊಲ್ಲೆದ್ದಿದ್ದ ಕಡೆ ರಾಜಕೀಯವಾಗಿ ನಿರ್ನಾಮವಾಗಿದ್ದ ಕಾಂಗ್ರೆಸ್‌ ಪಕ್ಷಕ್ಕೆ ಹೊಸ ಚೈತನ್ಯವನ್ನು ತಂದುಕೊಟ್ಟಿರುವುದು. ಮೂರನೆಯದಾಗಿ, ಪಕ್ಷವನ್ನು ಪುನರುಜ್ಜೀವನಗೊಳಿಸುವ ಮೂಲಕ, ನವೆಂಬರ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸಮಾಧಾನಕರ ಸಂಖ್ಯೆಯ ಸೀಟುಗಳಿಗಾಗಿ ಆರ್‌ಜೆಡಿ ನಾಯಕರೊಂದಿಗೆ ಚೌಕಾಸಿ ನಡೆಸುವ ಸ್ಥಿತಿ ತಂದಿರುವುದು’ ಎಂದು ರಾಜಕೀಯ ವಿಶ್ಲೇಷಕ ಗಿರಿಧರ್‌ ಝಾ ಅಭಿಪ್ರಾಯಪಟ್ಟಿದ್ದಾರೆ.

‘2020ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ಕಳಪೆ ಪ್ರದರ್ಶನ ತೋರಿದ್ದರಿಂದ, ಮತದಾರರ ಅಧಿಕಾರ ಯಾತ್ರೆಗೂ ಮುನ್ನ 243 ವಿಧಾನಸಭಾ ಕ್ಷೇತ್ರಗಳ ಪೈಕಿ 50 ಸೀಟುಗಳನ್ನೂ ನೀಡಲು ತೇಜಸ್ವಿ ಅವರಿಗೆ ಇಷ್ಟವಿರಲಿಲ್ಲ’ ಎಂದು ಝಾ ಹೇಳಿದ್ದಾರೆ.

‘ಪಕ್ಷದಲ್ಲಿ ಹೊಸ ಚೈತನ್ಯ’

‘2020ರ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ 19 ಸ್ಥಾನಗಳಲ್ಲಿ ಮಾತ್ರ ಗೆಲವು ಸಾಧಿಸಿತ್ತು. ಏಕೆಂದರೆ ಅಂತಹ ಸ್ಥಾನಗಳನ್ನು ನಮಗೆ ನೀಡಲಾಗಿತ್ತು. ಆದರೆ ರಾಹುಲ್‌ ಅವರ 15 ದಿನಗಳ ಯಾತ್ರೆಯು ನಮ್ಮ ಪಕ್ಷದಲ್ಲಿ ಹೊಸ ಉತ್ಸಾಹ ತುಂಬಿದೆ. ಸೀಟು ಹಂಚಿಕೆ ಸಂಬಂಧ ಆರ್‌ಜೆಡಿಯೊಂದಿಗೆ ಮಾತುಕತೆ ನಡೆಸುವ ಮೂಲಕ ಹೆಚ್ಚಿನ ಸಂಖ್ಯೆಯ ಸೀಟುಗಳು ಸಿಗುವ ನಿರೀಕ್ಷೆ ಇದೆ’ ಎಂದು ಕಾಂಗ್ರೆಸ್‌ ಬಿಹಾರ ಘಟಕದ ಮಾಜಿ ಅಧ್ಯಕ್ಷ ರಾಮ್‌ ಜತನ್‌ ಸಿನ್ಹಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.