
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್
ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿಯೂ ಮತಗಳ್ಳತನದ ವರದಿಯಾಗಿದೆ. ಸಂವಿಧಾನಕ್ಕೆ ದ್ರೋಹ ಮಾಡುತ್ತಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ಚುನಾವಣಾ ಆಯುಕ್ತರಾದ ಸುಖ್‌ಬಿರ್ ಸಿಂಗ್ ಸಂಧು ಹಾಗೂ ವಿವೇಕ್ ಜೋಶಿ ಅವರೇ 'ಪ್ರಜಾಪ್ರಭುತ್ವದ ಕಗ್ಗೊಲೆ'ಯ ಪ್ರಮುಖ ದೋಷಿಗಳು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಹಲವು ರಾಜ್ಯಗಳಲ್ಲಿ ಹಿಂದಿನ ಚುನಾವಣೆಗಳಲ್ಲಿ ಮತ ಚಲಾಯಿಸಿದ್ದ ಬಿಜೆಪಿಯ ಕೆಲವು ನಾಯಕರು ಮತ್ತು ಕಾರ್ಯಕರ್ತರು ಬಿಹಾರದಲ್ಲಿಯೂ ಮತ ಹಾಕಿದ್ದಾರೆ ಎಂದು ದೂರಿರುವ ಅವರು, ಮತದಾನದ ಹಕ್ಕನ್ನು ರಕ್ಷಿಸುವ ಹೊಣೆ ಹೊತ್ತವರೇ (ಚುನಾವಣಾ ಆಯೋಗ) ಜನರ ಭವಿಷ್ಯವನ್ನು ಕದಿಯಲು ಪಾಲುದಾರಿಕೆ ವಹಿಸಿದ್ದಾರೆ ಎಂದು ಗುಡುಗಿದ್ದಾರೆ.
243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ಎರಡು ಹಂತಗಳಲ್ಲಿ ಚುನಾವಣೆ ನಿಗದಿಯಾಗಿದೆ. ಮೊದಲ ಹಂತದಲ್ಲಿ 121 ಕ್ಷೇತ್ರಗಳಿಗೆ ಗುರುವಾರ (ನವೆಂಬರ್ 6ರಂದು) ಮತದಾನವಾಗಿದೆ.
ಸಾಮಾಜಿಕ ಮಾಧ್ಯಮ ವೇದಿಕೆ 'ಎಕ್ಸ್'ನಲ್ಲಿ ಹಿಂದಿಯಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಹುಲ್, 'ಪ್ರೀತಿಯ ಯುವ ಹಾಗೂ ಜೆನ್ ಝಿ ಸ್ನೇಹಿತರೇ, ಮತಗಳ್ಳತನದ ಮೂಲಕ ಹರಿಯಾಣದಲ್ಲಿ ಹೇಗೆ ಸರ್ಕಾರ ರಚಿಸಲಾಯಿತು, ಇಡೀ ರಾಜ್ಯದ ಸಾರ್ವಜನಿಕರ ಅಭಿಪ್ರಾಯವನ್ನು ಹೇಗೆ ಕಸಿಯಲಾಯಿತು ಎಂಬುದನ್ನು ನಿನ್ನೆಯಷ್ಟೇ ಸಾಕ್ಷಿ ಸಹಿತ ನಿಮ್ಮ ಮುಂದೆ ಇಟ್ಟಿದ್ದೆ' ಎಂದು ಹೇಳುತ್ತಾ ಮಾತು ಆರಂಭಿಸಿದ್ದಾರೆ.
'ಸಮಗ್ರ ಪರಿಷ್ಕರಣೆಯ (ಎಸ್‌ಐಆರ್) ಮೂಲಕ ಮತದಾರರ ಪಟ್ಟಿಯನ್ನು ವ್ಯಾಪಕವಾಗಿ ತಿರುಚಲಾಗುತ್ತದೆ ಎಂಬ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಕೆಲವು ದಿನಗಳ ಹಿಂದೆ ಬಿಹಾರದಲ್ಲಿ 'ವೋಟರ್ ಅಧಿಕಾರ ಯಾತ್ರೆ' ನಡೆಸಿದ್ದೆ. ಇಂದು, ಬಿಹಾರದ ಮೂಲೆ ಮೂಲೆಗಳಿಂದ ವರದಿಯಾಗಿರುವ ಸುದ್ದಿಗಳು, ವಿಡಿಯೊಗಳು ಮತಗಳ್ಳತನದ ಸಾಕ್ಷ್ಯಗಳನ್ನು ಮತ್ತಷ್ಟು ಬಲಪಡಿಸಿವೆ' ಎಂದಿದ್ದಾರೆ.
'ಲಕ್ಷಾಂತರ ಮತದಾರರನ್ನು ಈಗಾಗಲೇ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇದೀಗ, ಜನರು ತಮ್ಮ ಹಕ್ಕು ಚಲಾಯಿಸದಂತೆ ಮತಗಟ್ಟೆಗಳ ಬಳಿ ತಡೆಯಲಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಮತಗಳ್ಳತನದ ಮೂಲಕ ರಚನೆಯಾದ ಸರ್ಕಾರ ಯುವಕರು, ಜೆನ್ ಝಿ, ಸಾರ್ವಜನಿಕರ ಹಿತದೃಷ್ಟಿಯಿಂದ ಎಂದಿಗೂ ಕೆಲಸ ಮಾಡುವುದಿಲ್ಲ ಎಂಬುದು ನೆನಪಿರಲಿ' ಎಂದು ಒತ್ತಿ ಹೇಳಿದ್ದಾರೆ.
'ಜ್ಞಾನೇಶ್ ಕುಮಾರ್, ಸುಖ್‌ಬಿರ್ ಸಿಂಗ್ ಸಂಧು ಹಾಗೂ ವಿವೇಕ್ ಜೋಶಿ ಅವರು ಪ್ರಜಾಪ್ರಭುತ್ವದ ಕಗ್ಗೊಲೆಯ ಪ್ರಮುಖ ಅಪರಾಧಿಗಳು. ಇವರು ಚುನಾವಣಾ ಆಯೋಗದ ಉನ್ನತ ಅಧಿಕಾರಿಗಳಾಗಿದ್ದರೂ, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ವಿರುದ್ಧ ದೊಡ್ಡ ಪ್ರಮಾಣದ ದ್ರೋಹವೆಸಗುತ್ತಿದ್ದಾರೆ' ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಹರಿಯಾಣದಂತೆ ಬಿಹಾರದಲ್ಲೂ ಮತಗಳನ್ನು ಕದಿಯಲು ಸಿದ್ಧತೆ ನಡೆಸಿದೆ ಎಂದು ಆರೋಪಿಸಿದ್ದರು.
ಬಿಹಾರದಲ್ಲಿ ಎರಡನೇ ಹಂತದಲ್ಲಿ 122 ಕ್ಷೇತ್ರಗಳಿಗೆ ನವೆಂಬರ್ 11ರಂದು ಮತದಾನವಾಗಲಿದೆ. ಮೂರು ದಿನಗಳ ನಂತರ (ನವೆಂಬರ್ 14ರಂದು) ಮತ ಎಣಿಕೆಯಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.