ರಾಹುಲ್ ಗಾಂಧಿ
ಕೃಪೆ: ಪಿಟಿಐ
ನವದೆಹಲಿ: ಎಬಿವಿಪಿ ಸಂಘಟನೆಯ ಮಾಜಿ ನಾಯಕ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿ ನೀಡಿರುವ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಯಾರ ಮತಗಳ್ಳತನಗಳು ಬಹಿರಂಗವಾಗಿಯೋ ಅವರು ಮತ್ತು ಸೈದ್ಧಾಂತಿಕವಾಗಿ ಸೋತಿರುವವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಮೌನವಾಗಿಸಲು ಸಂಚು ರೂಪಿಸುತ್ತಿದ್ದಾರೆ ಎಂದು ಆರೋಪಿಸಿದೆ.
ಆರ್‌ಎಸ್‌ಎಸ್‌ನ ವಿದ್ಯಾರ್ಥಿ ಸಂಘಟನೆ ಎಬಿವಿಪಿಯ ಕೇರಳ ಘಟಕದ ಮಾಜಿ ಅಧ್ಯಕ್ಷ ಪ್ರಿಂಟು ಮಹದೇವ್ ಅವರು ರಾಹುಲ್ ಗಾಂಧಿಗೆ ಭಯಾನಕ ಹಾಗೂ ಘೋರ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದೆ.
ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮಾದ್ಯಮ ಹಾಗೂ ಪ್ರಸಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಅವರು ವಿಡಿಯೊ ಹೇಳಿಕೆ ಹಂಚಿಕೊಂಡಿದ್ದಾರೆ. ಅದರೊಂದಿಗೆ, 'ದೇಶದ ಸಿದ್ಧಾಂತಗಳನ್ನು ಸೋಲಿಸಲು ಆರ್‌ಎಸ್‌ಎಸ್ ವಿಫಲವಾದಾಗಲೆಲ್ಲ, ಅದರ ಕಾರ್ಯಕರ್ತರು ಹಿಂಸಾಚಾರದ ಹಾದಿ ಹಿಡಿಯುತ್ತಾರೆ. ಮಹಾತ್ಮ ಗಾಂಧಿ ಅವರನ್ನು ನಾಥುರಾಮ್ ಗೋಡ್ಸೆ ಕೊಂದರು. ಈಗ ಬಿಜೆಪಿ ಸೈದ್ಧಾಂತಿಕವಾಗಿ ಸೋಲುತ್ತಿದೆ. ಅದರ ವಕ್ತಾರರು ಮತ್ತು ನಾಯಕರು ರಾಹುಲ್ ಗಾಂಧಿಯವರನ್ನು ಕೊಲ್ಲುವ ಬೆದರಿಕೆಯೊಡ್ಡುತ್ತಿದ್ದಾರೆ. ಕೋಟ್ಯಂತರ ಬಡವರು, ದುರ್ಬಲ ವರ್ಗದ ಜನರ ಧ್ವನಿ ಅಡಗಿಸಲು ಪಿತೂರಿ ನಡೆಯುತ್ತಿದೆ. ರಾಹುಲ್ ಗಾಂಧಿಯವರ ಬಾಯಿ ಮುಚ್ಚಿಸಲು ಸಂಚು ನಡೆಯುತ್ತಿದೆ' ಎಂದು ಬರೆದುಕೊಂಡಿದ್ದಾರೆ.
ವಿಡಿಯೊದಲ್ಲಿ ಖೇರಾ ಅವರು, 'ಬಿಜೆಪಿಯ ವಕ್ತಾರರೊಬ್ಬರು, ರಾಹುಲ್ ಗಾಂಧಿ ಎದೆಗೆ ಗುಂಡು ಹಾರಿಸಲಾಗುವುದು ಎಂದು ಟಿವಿ ಕಾರ್ಯಕ್ರಮದಲ್ಲೇ ಹೇಳಿದ್ದಾರೆ' ಎಂದಿದ್ದಾರೆ.
'ಇದಕ್ಕೂ ಮೊದಲು, ರಾಹುಲ್ ಸುರಕ್ಷತೆಗೆ ಸಂಬಂಧಿಸಿದಂತೆ ಮಲ್ಲಿಕಾರ್ಜುನ ಖರ್ಗೆ (ಕಾಂಗ್ರೆಸ್ ಅಧ್ಯಕ್ಷ) ಅವರಿಗೆ ಪತ್ರ ಬರೆದಿದ್ದ ಸಿಆರ್‌ಪಿಎಫ್, ಅದನ್ನು ಸೋರಿಕೆ ಮಾಡಿತ್ತು. ರಾಹುಲ್ ಅವರ ಭದ್ರತೆಯ ವಿಚಾರವನ್ನು ರಾಜಕೀಯಗೊಳಿಸುತ್ತಿರುವುದು ಏಕೆ?, ಅಂತಹ ವಾತಾವವರಣವನ್ನೇಕೆ ಸೃಷ್ಟಿಸಲಾಗುತ್ತಿದೆ. ಇದೆಲ್ಲದರ ಜೊತೆಗೆ ಪಿತೂರಿಯ ವಾಸನೆ ಬರುತ್ತಿದೆ' ಎಂದಿದ್ದಾರೆ.
'ಯಾರೆಲ್ಲ ಸೈದ್ಧಾಂತಿಕವಾಗಿ ಸೋತಿದ್ದಾರೋ, ಆಲೋಚನೆಗಳನ್ನು ಸೋಲಿಸಲು ಯಾರ ಬಳಿ ಹೊಸ ಚಿಂತನೆಗಳಿಲ್ಲವೋ ಅವರು ಈ ಸಂಚಿನ ಹಿಂದೆ ಇದ್ದಾರೆ. ಈ ಪಿತೂರಿ ಬಹಿರಂಗವಾಗಬೇಕು. ರಾಹುಲ್ ಗಾಂಧಿ ಅವರ ಬಾಯಿ ಮುಚ್ಚಿಸಲು ಮೊದಲು ಅವಹೇಳನ ಮಾಡುತ್ತಿದ್ದಿರಿ. ಇದೀಗ, ಗುಂಡಿನ ದಾಳಿಯ ಬೆದರಿಕೆ ಒಡ್ಡುತ್ತಿದ್ದೀರಿ' ಎಂದು ಕಿಡಿಕಾರಿದ್ದಾರೆ.
ರಾಹುಲ್ ಅವರು ಬಿಜೆಪಿ ಮತ್ತು ಚುನಾವಣಾ ಆಯೋಗದ ವಿರುದ್ಧ ಮಾಡುತ್ತಿರುವ ಮತಗಳ್ಳತನದ ಆರೋಪಗಳನ್ನು ಉಲ್ಲೇಖಿಸಿರುವ ಖೇರಾ, 'ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಜನರು, ರಾಹುಲ್ ಗಾಂಧಿ ಅವರು ಎತ್ತುತ್ತಿರುವ ವಿಚಾರಗಳತ್ತ ಆಕರ್ಷಿತರಾಗುತ್ತಿದ್ದಾರೆ ಎಂಬ ಸತ್ಯವನ್ನು ಅವರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ನೀವು ಮತಗಳ್ಳತನ ಮಾಡಿರುವುದು ಬಯಲಾಗಿದೆ. ನಿಮ್ಮ ಸಮಯ ಮುಗಿದಿದೆ ಎಂಬುದು ನಿಮಗೂ ಗೊತ್ತಾಗಿದೆ' ಎಂದು ತಿವಿದಿದ್ದಾರೆ.
ಸಂಚು ರೂಪಿಸುತ್ತಿರುವುದು ಯಾರು ಎಂಬುದು ದೇಶಕ್ಕೇ ಗೊತ್ತಿದೆ. ಅವರು ಹಿಂಸಾಚಾರದಲ್ಲಿ ಯಶಸ್ವಿಯಾಗಲು ಕಾಂಗ್ರೆಸ್ ಬಿಡುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.