ರಾಹುಲ್ ಗಾಂಧಿ
ನವದೆಹಲಿ: ಸಂವಿಧಾನ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡು ದೇಶದಾದ್ಯಂತ ಓಡಾಡುತ್ತಿದ್ದವರೇ, ಸಂವಿಧಾನವನ್ನು ಉಲ್ಲಂಘಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿ ಬಿಜೆಪಿ ಟೀಕಿಸಿದೆ.
2022ರ ಭಾರತ್ ಜೋಡೊ ಯಾತ್ರೆ ವೇಳೆ ಭಾರತೀಯ ಸೇನೆಯ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದ ಪ್ರಕರಣ ಸಂಬಂಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸುಪ್ರೀಂ ಕೋರ್ಟ್ ಸೋಮವಾರ ತರಾಟೆಗೆ ತೆಗೆದುಕೊಂಡಿತ್ತು.
‘ನೀವು ನಿಜವಾದ ಭಾರತೀಯರಾಗಿದ್ದರೆ, ಅಂತಹ ಹೇಳಿಕೆಗಳನ್ನು ನೀಡುತ್ತಿರಲಿಲ್ಲ’ ಎಂದೂ ಸುಪ್ರೀಂ ಕೋರ್ಟ್ ಹೇಳಿತ್ತು.
ರಾಹುಲ್ ಗಾಂಧಿ ಉದ್ದೇಶಿಸಿ ಸುಪ್ರೀಂ ಕೋರ್ಟ್ ಹೇಳಿಕೆ ನೀಡಿದ್ದು, ಇದು ಅವರಿಗೆ ಗಂಭೀರ ಎಚ್ಚರಿಕೆಯಾಗಬೇಕು ಎಂದು ಬಿಜೆಪಿ ಸಂಸದ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ನೀವು, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಪ್ರಬುದ್ಧತೆಯ ನಡುವಳಿಕೆಯನ್ನು ತೋರಿಸಿ. ಒಬ್ಬ ಭಾರತೀಯ ಈ ರೀತಿ ಮಾತನಾಡಬಾರದು ಎಂದು ಸುಪ್ರೀಂ ಕೋರ್ಟ್ ಅವರಿಗೆ ಹೇಳುವುದಕ್ಕಿಂತ ದೊಡ್ಡ ಸಂದೇಶ ಇನ್ನೊಂದಿದೆಯೇ? ಎಂದು ಬಿಜೆಪಿ ನಾಯಕ ಧರ್ಮೇಂದ್ರ ಪ್ರಧಾನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕರು ಮತ್ತು ಅವರ ಕುಟುಂಬವು ಸಂವಿಧಾನವನ್ನು ಸ್ವಲ್ಪವಾದರೂ ಗೌರವಿಸಿದ್ದರೆ, ಸುಪ್ರೀಂ ಕೋರ್ಟ್ ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸುವ ಅಗತ್ಯವಿರಲಿಲ್ಲ. ಅವರು ಸಾಂವಿಧಾನಿಕ ಮೌಲ್ಯಗಳ ಅತಿದೊಡ್ಡ ಉಲ್ಲಂಘನೆಗಾರರು ಎಂದು ಅವರು ಪ್ರಧಾನ್ ತಿಳಿಸಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.