ರಾಹುಲ್ ಗಾಂಧಿ, ಪ್ರಧಾನಿ ಮೋದಿ
ನವದೆಹಲಿ: ಆಫ್ಗಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಖಿ ಅವರ ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತೆಯರ ಅನುಪಸ್ಥಿತಿಯನ್ನು ಪ್ರಶ್ನಿಸಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಭಾರತಕ್ಕೆ ಭೇಟಿ ನೀಡಿರುವ ಆಫ್ಗಾನ್ ಸಚಿವ ಮುತ್ತಾಖಿ ಅವರ ಪ್ರತಿಕಾಗೋಷ್ಠಿ ವೇಳೆ ಪತ್ರಕರ್ತೆಯರನ್ನು ವೇದಿಕೆಯಿಂದ ಹೊರಗಿಡಲು ಅವಕಾಶ ನೀಡುವ ಮೂಲಕ ಪ್ರಧಾನಿ ಮೋದಿ ದೇಶದ ಪ್ರತಿಯೊಬ್ಬ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ. ಮಹಿಳೆಯ ಪರವಾಗಿ ಧ್ವನಿಗೂಡಿಸಲು ಮೋದಿ ದುರ್ಬಲರಾಗಿದ್ದಾರೆ ಎಂಬುವುದು ಸ್ಪಷ್ಟವಾಗಿದೆ ಎಂದು ರಾಹುಲ್ 'ಎಕ್ಸ್'ನಲ್ಲಿ ಕಿಡಿಕಾರಿದ್ದಾರೆ.
ಮಹಿಳಾ ಪತ್ರಕರ್ತೆಯರನ್ನು ಪ್ರತಿಕಾಗೋಷ್ಠಿಯಿಂದ ಹೊರಗಿಡಲು ಅನುಮತಿಸಿದೇಕೆ, ಈ ಬಗ್ಗೆ ಯಾವುದೇ ನಿಲುವು ತೆಗೆದುಕೊಳ್ಳಲಿಲ್ಲ ಏಕೆ?, ಮೌನವಹಿಸಿದ್ದು ಏಕೆ? ಎಂದು ಮೋದಿ ವಿರುದ್ಧ ರಾಹುಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ದೇಶದಲ್ಲಿ ಮಹಿಳೆಯರಿಗೆ ಪ್ರತಿಯೊಂದು ಕ್ಷೇತ್ರದಲ್ಲೂ ಸಮಾನವಾಗಿ ಭಾಗವಹಿಸುವಿಕೆಯ ಹಕ್ಕಿದೆ. ಇಂತಹ ತಾರತಮ್ಯದ ನಡುವೆಯೂ ನಿಮ್ಮ ಮೌನವು, ನಾರಿ ಶಕ್ತಿಯ ಕುರಿತಾದ ಘೋಷಣೆಗಳ ಶೂನ್ಯತೆಗೆ ಸಾಕ್ಷಿಯಾಗಿದೆ ಎಂದು ರಾಹುಲ್ ಹೇಳಿದ್ದಾರೆ.