ರಾಹುಲ್ ಗಾಂಧಿ
(ಪಿಟಿಐ ಚಿತ್ರ)
ನವದೆಹಲಿ: 'ಮತ ಕಳ್ಳತನ' ಆರೋಪ ಸಂಬಂಧ ಇಂದು (ಗುರುವಾರ) ಮತ್ತೆ ಸುದ್ದಿಗೋಷ್ಠಿ ನಡೆಸಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, 'ದೇಶದ ಪ್ರಜಾಪ್ರಭುತ್ವವನ್ನು ನಾಶಪಡಿಸಿದ ಜನರನ್ನು ಚುನಾವಣಾ ಆಯೋಗವು ರಕ್ಷಿಸುತ್ತಿದೆ' ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ವೇಳೆ ಹೈಡ್ರೋಜನ್ ಬಾಂಬ್ ಇನ್ನಷ್ಟೇ ಬರಬೇಕಿದೆ ಎಂದು ಹೇಳಿದ್ದಾರೆ.
'ಇದು ಎಚ್ (ಹೈಡ್ರೋಜನ್) ಬಾಂಬ್ ಇಲ್ಲ. ಎಚ್ ಬಾಂಬ್ ಬರುತ್ತಿದೆ. ದೇಶದ ಚುನಾವಣೆಗಳಲ್ಲಿ ಹೇಗೆ ಅಕ್ರಮ ನಡೆಯುತ್ತಿದೆ ಎಂಬುದನ್ನು ತೋರಿಸಿ ಕೊಡುವುದರಲ್ಲಿ ಇದು ಮತ್ತೊಂದು ಮೈಲಿಗಲ್ಲು ಆಗಿದೆ' ಎಂದು ತಿಳಿಸಿದ್ದಾರೆ.
'ಕರ್ನಾಟಕ, ಮಹಾರಾಷ್ಟ್ರ, ಹರಿಯಾಣ, ಉತ್ತರ ಪ್ರದೇಶ ರಾಜ್ಯಗಳಲ್ಲಿ ಮತದಾರರನ್ನು ಪಟ್ಟಿಯಿಂದ ಸಾಮೂಹಿಕವಾಗಿ ಅಳಿಸಿ ಹಾಕಲಾಯಿತು' ಎಂದು ಅವರು ಆಪಾದಿಸಿದ್ದಾರೆ.
'ಮತದಾರರ ಪಟ್ಟಿಯಿಂದ ಲಕ್ಷಾಂತರ ಮಂದಿಯನ್ನು ತೆಗೆದು ಹಾಕುವ ಉದ್ದೇಶದಿಂದ ಅಲ್ಪಸಂಖ್ಯಾತರು, ಒಬಿಸಿ ಹಾಗೂ ದಲಿತರನ್ನು ವ್ಯವಸ್ಥಿತವಾಗಿ ಗುರಿಪಡಿಸಲಾಗಿದೆ' ಎಂದು ರಾಹುಲ್ ಹೇಳಿದ್ದಾರೆ.
'ಕರ್ನಾಟಕದ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ 6,018 ಮಂದಿಯ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕುವ ಪ್ರಯತ್ನ ನಡೆದಿತ್ತು' ಎಂದು ಅವರು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.