ADVERTISEMENT

ಮತಗಳ್ಳತನ ಆರೋಪಕ್ಕೆ ವಾರದಲ್ಲಿ ಪ್ರಮಾಣಪತ್ರ ಸಲ್ಲಿಸಿ: ರಾಹುಲ್‌ಗೆ ಚುನಾವಣಾ ಆಯೋಗ

ಪಿಟಿಐ
Published 17 ಆಗಸ್ಟ್ 2025, 11:49 IST
Last Updated 17 ಆಗಸ್ಟ್ 2025, 11:49 IST
<div class="paragraphs"><p>ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್</p></div>

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್

   

ಕೃಪೆ: ಪಿಟಿಐ

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಮತದಾರರ ಪಟ್ಟಿಯ ಅಕ್ರಮಗಳ ಕುರಿತ ತಮ್ಮ ಆರೋಪಕ್ಕೆ ಸಂಬಂಧಿಸಿದಂತೆ ಏಳು ದಿನಗಳ ಒಳಗಾಗಿ ಲಿಖಿತ ಪ್ರಮಾಣಪತ್ರ ಸಲ್ಲಿಸಬೇಕು. ಇಲ್ಲದಿದ್ದಲ್ಲಿ ‘ಮತ ಕಳವು’ ಆರೋಪವನ್ನು ಆಧಾರರಹಿತ, ಅಸಿಂಧು ಎಂದು ಪರಿಗಣಿಸಲಾಗುವುದು ಎಂದು ಚುನಾವಣಾ ಆಯೋಗ ಹೇಳಿದೆ.

ADVERTISEMENT

ಇಲ್ಲದೇ ಹೋದರೆ, ನಿರಾಧಾರ ಆರೋಪ ಮಾಡಿದ್ದಕ್ಕಾಗಿ ದೇಶದ ಮುಂದೆ ಕ್ಷಮೆಯಾಚಿಸಬೇಕು ಎಂದೂ ಅದು ಆಗ್ರಹ ಮಾಡಿದೆ.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್, ‘ರಾಜಕೀಯ ಉದ್ದೇಶಗಳಿಗಾಗಿ ಮತದಾರರನ್ನು ಗುರಿಯಾಗಿಸಲು ಚುನಾವಣಾ ಆಯೋಗವನ್ನು ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ. ಇಂಥ ಸಂದರ್ಭದಲ್ಲಿ ಆಯೋಗವು ಮತದಾರರೊಂದಿಗೆ ನಿಲ್ಲಲಿದೆ’ ಎಂದು ಭಾನುವಾರ ಹೇಳಿದರು.

‘ಯಾವುದೇ ಒಂದು ಕ್ಷೇತ್ರದ ಮತದಾರನಲ್ಲದ ವ್ಯಕ್ತಿ ಲಿಖಿತ ಪ್ರಮಾಣಪತ್ರದ ಮೂಲಕ ಮಾತ್ರ ಆಯೋಗಕ್ಕೆ ದೂರು ಸಲ್ಲಿಸಬಹುದು. ರಾಹುಲ್‌ ಅವರು ಲಿಖಿತ ಪ್ರಮಾಣಪತ್ರ ಸಲ್ಲಿಸದೆಯೇ 1.5 ಲಕ್ಷ ಮತದಾರರಿಗೆ ಆಯೋಗ ನೋಟಿಸ್‌ ಕಳುಹಿಸಬೇಕೇ’ ಎಂದು ಜ್ಞಾನೇಶ್‌ ಕುಮಾರ್‌ ಪ್ರಶ್ನಿಸಿದರು.

‘ಸೂರ್ಯ ಯಾವತ್ತಿಗೂ ಪೂರ್ವದಲ್ಲೇ ಉದಯಿಸುತ್ತಾನೆ. ಯಾರೋ ಏನೋ ಹೇಳುತ್ತಾರೆ ಎಂದು ಬೇರೆ ದಿಕ್ಕಿನಲ್ಲಿ ಉದಯಿಸುವುದಿಲ್ಲ. ಮತ ಕಳವು ಆರೋಪಗಳಿಗೆ ಆಯೋಗವಾಗಲಿ, ಮತದಾರರಾಗಲಿ ಹೆದರುವುದಿಲ್ಲ’ ಎಂದರು.

ರಾಹುಲ್‌ ಗಾಂಧಿ ಅವರು ಜುಲೈ 31ರಂದು ನಡೆಸಿದ ಮಾಧ್ಯಗೋಷ್ಠಿಯಲ್ಲಿ, 2024ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕರ್ನಾಟಕದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ಒಂದು ಲಕ್ಷ ಮತಗಳ ಕಳ್ಳತನ ನಡೆದಿದೆ ಎಂದು ಆರೋಪಿಸಿದ್ದರು.

ತಮ್ಮ ಆರೋಪಗಳ ಬಗ್ಗೆ ಪ್ರಮಾಣಪತ್ರ ಸಲ್ಲಿಸುವಂತೆ ಹಲವು ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳು ರಾಹುಲ್‌ ಗಾಂಧಿ ಅವರನ್ನು ಒತ್ತಾಯಿಸಿದ್ದರು. ಆದರೆ, ಪ್ರಮಾಣಪತ್ರ ಸಲ್ಲಿಸಲು ರಾಹುಲ್‌ ನಿರಾಕರಿಸಿದ್ದರು.

ಆಯೋಗ ಹೇಳಿದ್ದು...

  • ಆಯೋಗಕ್ಕೆ ಆಡಳಿತ ಪಕ್ಷ ಅಥವಾ ವಿರೋಧ ಪಕ್ಷ ಎಂಬ ಯಾವುದೇ ಭೇದ ಇಲ್ಲ

  • ‘ವೋಟ್‌ ಚೋರಿ’ (ಮತ ಕಳವು) ತರಹದ ಅಸಮರ್ಪಕ ಪದ ಬಳಕೆ ಮೂಲಕ ರಾಹುಲ್ ಗಾಂಧಿ ಅವರಿಂದ ಸಂವಿಧಾನಕ್ಕೆ ಅಪಮಾನ

  • ಬಿಹಾರದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆಗೆ ರಾಜಕೀಯ ಪಕ್ಷಗಳೇ ಮನವಿ ಮಾಡಿದ್ದವು

  • ಕರಡು ಮತದಾರರ ಪಟ್ಟಿಯಲ್ಲಿನ ದೋಷಗಳ ಕುರಿತು ಆಕ್ಷೇಪಣೆ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ಇರುತ್ತದೆ. ಆಯೋಗದ ಬಾಗಿಲು ಪ್ರತಿಯೊಬ್ಬರಿಗೂ ಸಮಾನವಾಗಿ ಸದಾ ತೆರೆದಿರುತ್ತದೆ

  • ಸಾಂವಿಧಾನಿಕ ಹೊಣೆಗಾರಿಕೆಗಳಿಂದ ಆಯೋಗವು ಹಿಂದೆ ಸರಿಯುವುದಿಲ್ಲ

  • ಒಂದು ಕೋಟಿ ಅಧಿಕಾರಿಗಳು ಎರಡು ಕೋಟಿ ಚುನಾವಣಾ ಏಜೆಂಟ್‌ಗಳು ಮತ್ತು 10 ಲಕ್ಷ ಬೂತ್‌ ಮಟ್ಟದ ಏಜೆಂಟ್‌ಗಳು ಲೋಕಸಭಾ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಇಂಥ ಪಾರದರ್ಶಕ ವ್ಯವಸ್ಥೆ ನಡುವೆಯೂ ಮತ ಕಳವು ಹೇಗೆ ಸಾಧ್ಯ?

ಆಯೋಗದ ಅದಕ್ಷತೆ, ಪಕ್ಷಪಾತಿ ನಿಲುವು ಬಯಲು: ಕಾಂಗ್ರೆಸ್‌

ಚುನಾವಣಾ ಆಯೋಗದ ಹೇಳಿಕೆಯು ಅದರ ಅದಕ್ಷತೆ ಮಾತ್ರವಲ್ಲ ಪಕ್ಷಪಾತಿ ನಿಲುವನ್ನೂ ಬಯಲಿಗೆ ಎಳೆದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಚುನಾವಣಾ ಆಯೋಗದ ತಾರತಮ್ಯಕ್ಕೆ ಹಲವು ಪುರಾವೆಗಳಿರುವಾಗ ‘ಆಯೋಗಕ್ಕೆ ಆಡಳಿತ ಪಕ್ಷ ಅಥವಾ ವಿಪಕ್ಷಗಳೆಂಬ ಭೇದ ಇಲ್ಲ’ ಎಂದು ಅದು ಹೇಳಿರುವುದು ‘ಹಾಸ್ಯಾಸ್ಪದ’ ಎಂದು ಹೇಳಿದೆ.

ಚುನಾವಣಾ ಆಯೋಗದ ಮಾಧ್ಯಮಗೋಷ್ಠಿಯ ಬೆನ್ನಲ್ಲೇ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್‌ ಅವರು ‘ಸುಪ್ರೀಂ ಕೋರ್ಟ್‌ ಆಗಸ್ಟ್‌ 14ರಂದು ನೀಡಿರುವ ಆದೇಶವನ್ನು ಆಯೋಗವು ಅನುಷ್ಠಾನಗೊಳಿಸುವುದೇ’ ಎಂದು ಪ್ರಶ್ನಿಸಿದ್ದಾರೆ.

‘ರಾಹುಲ್‌ ಗಾಂಧಿ ಅವರ ಯಾವುದೇ ಪ್ರಶ್ನೆಗೂ ಚುನಾವಣಾ ಆಯೋಗ ಸಮರ್ಪಕ ಉತ್ತರ ನೀಡಿಲ್ಲ’ ಎಂದು ಅವರು ‘ಎಕ್ಸ್‌’ನಲ್ಲಿ ಹೇಳಿದ್ದಾರೆ.

ಮತ ಕಳವು ಆರೋಪದ ಬಗ್ಗೆ ಲಿಖಿತ ಪ್ರಮಾಣ ಸಲ್ಲಿಸುವಂತೆ ಆಯೋಗವು ನನ್ನನ್ನು ಮಾತ್ರ ಕೇಳಿದೆ. ಬಿಜೆಪಿ ನಾಯಕರು ತಕರಾರು ಎತ್ತಿದ್ದಾಗ ಆಯೋಗ ಅವರನ್ನು ಪ್ರಶ್ನಿಸಿರಲಿಲ್ಲ.
– ರಾಹುಲ್‌ ಗಾಂಧಿ, ಕಾಂಗ್ರೆಸ್‌ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.