ADVERTISEMENT

ಹರಿಯಾಣದಲ್ಲಿ ಮತ ಕಳ್ಳತನ | ರಾಹುಲ್ ಗಾಂಧಿ ಆರೋಪ ಆಧಾರರಹಿತ: ಚುನಾವಣಾ ಆಯೋಗ

ಪಿಟಿಐ
Published 5 ನವೆಂಬರ್ 2025, 9:15 IST
Last Updated 5 ನವೆಂಬರ್ 2025, 9:15 IST
<div class="paragraphs"><p>ರಾಹುಲ್ ಗಾಂಧಿ, ಚುನವಾಣಾ ಆಯೋಗ</p></div>

ರಾಹುಲ್ ಗಾಂಧಿ, ಚುನವಾಣಾ ಆಯೋಗ

   

(ಪಿಟಿಐ ಚಿತ್ರ)

ನವದೆಹಲಿ: ಹರಿಯಾಣದಲ್ಲೂ ಮತ ಕಳ್ಳತನ ಬಗ್ಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಡಿರುವ ಆರೋಪಗಳು ಆಧಾರರಹಿತವಾಗಿವೆ. ಹರಿಯಾಣದಲ್ಲಿ ಮತದಾರರ ಪಟ್ಟಿ ಅಕ್ರಮದ ಬಗ್ಗೆ ಯಾವುದೇ ಮೇಲ್ಮನವಿ ಸಲ್ಲಿಕೆಯಾಗಿಲ್ಲ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ADVERTISEMENT

ಬಲ್ಕ್ ಮತದಾರರ ಆರೋಪಕ್ಕೆ ಸಂಬಂಧಿಸಿದಂತೆ ಪರಿಷ್ಕರಣೆ ಸಮಯದಲ್ಲಿ ಕಾಂಗ್ರೆಸ್‌ನ ಬೂತ್ ಮಟ್ಟದ ಏಜೆಂಟ್‌ಗಳು (ಬಿಎಲ್ಎ) ಏಕೆ ದೂರು ಅಥವಾ ಆಕ್ಷೇಪಣೆಯನ್ನು ಎತ್ತಿರಲಿಲ್ಲ ಎಂದು ಹೇಳಿದೆ.

ಮತದಾನ ಪ್ರಕ್ರಿಯೆಯ ಮೇಲ್ವಿಚಾರಣೆಗಾಗಿ ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟರುಗಳನ್ನು ನೇಮಕ ಮಾಡಲಾಗುತ್ತದೆ.

ಹರಿಯಾಣ ವಿಧಾನಸಭಾ ಚುನಾವಣೆಯಲ್ಲೂ ಮತ ಕಳ್ಳತನ ನಡೆದಿದ್ದು, ಕಾಂಗ್ರೆಸ್‌ನ ಗೆಲುವು ಬಿಜೆಪಿಯದ್ದಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು (ಬುಧವಾರ) ಗಂಭೀರ ಆರೋಪ ಮಾಡಿದ್ದರು.

ಹರಿಯಾಣದಲ್ಲಿ 25 ಲಕ್ಷ ಮತಗಳು ಕಳ್ಳತನವಾಗಿದೆ. ಇದರಲ್ಲಿ 5.21 ಲಕ್ಷ ನಕಲಿ ಮತದಾರರು, 93,174 ಅನರ್ಹ ಮತದಾರರು ಮತ್ತು 19.26 ಲಕ್ಷ ಬಲ್ಕ್ ಮತದಾರರು ಇದ್ದರು ಎಂದು ದೂರಿದ್ದಾರೆ.

ಆರೋಪದಲ್ಲಿ ಹುರುಳಿಲ್ಲ: ರಿಜಿಜು

ನವದೆಹಲಿ (ಪಿಟಿಐ): ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಮತಕಳವು ಆಗಿದೆ ಎಂಬುದಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಪ್ರತಿಕ್ರಿಯಿಸಿದರು.

‘ರಾಹುಲ್‌ ಅವರು ತನ್ನ ವೈಫಲ್ಯಗಳನ್ನು ಮರೆ ಮಾಚಲು ಚುನಾವಣಾ ಆಯೋಗದ ಮೇಲೆ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ದೇಶವನ್ನೇ ಅವಮಾನಿಸುತ್ತಿದ್ದಾರೆ’ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಭಾರತ ವಿರೋಧಿ ಶಕ್ತಿಗಳ ಜತೆ ಸೇರಿಕೊಂಡಿರುವ ಅವರು, ದೇಶಕ್ಕೆ ಕಳಂಕ ತರಲು ಯತ್ನಿಸುತ್ತಿದ್ದಾರೆ’ ಎಂದು ದೂರಿದರು.

‘ಚುನಾವಣಾ ಸಮಯದಲ್ಲಿ ಜನರನ್ನು ಭೇಟಿ ಮಾಡದೆ, ವಿದೇಶಕ್ಕೆ ಹಾರುವ ರಾಹುಲ್‌, ಪಕ್ಷ ಸೋತ ಬಳಿಕ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾರೆ’ ಎಂದು ಸಚಿವರು ಹೇಳಿದರು.

‘ಮತದಾನದಲ್ಲಿ ಯಾವುದೇ ಅಕ್ರಮ ಕಂಡುಬಂದರೆ, ಅದನ್ನು ಚುನಾವಣಾ ಆಯೋಗ ಅಥವಾ ನ್ಯಾಯಾಲಯದಲ್ಲಿ ಪ್ರಶ್ನಿಸಬೇಕು. ಅದನ್ನು ಅವರು ಎಂದಿಗೂ ಮಾಡಿಲ್ಲ’ ಎಂದು ಅವರು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.