ADVERTISEMENT

ದುರಾಸೆ ಗೆದ್ದಿದೆ, ಆದರೆ ಪ್ರಜಾಪ್ರಭುತ್ವ ಸೋತಿದೆ: ರಾಹುಲ್ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2019, 7:43 IST
Last Updated 24 ಜುಲೈ 2019, 7:43 IST
   

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಪತನಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕರಾಹುಲ್‌ ಗಾಂಧಿ,‘ತಮ್ಮ ದುರಾಸೆಯ ಅಧಿಕಾರದ ಹಾದಿಗೆ ಮೈತ್ರಿ ಸರ್ಕಾರ ಅಡ್ಡಿ ಎಂದುಕೊಂಡಿದ್ದವರಿಗೆ ಜಯವಾಗಿದೆ. ಪ್ರಜಾಪ್ರಭುತ್ವ ಮತ್ತು ಕರ್ನಾಟಕದ ಜನರು ಸೋತು ಹೋಗಿದ್ದಾರೆ’ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಂಡಿಸಿದ ವಿಶ್ವಾಸಮತ ನಿರ್ಣಯಕ್ಕೆ ಸೋಲಾಗುವುದರೊಂದಿಗೆ 14 ತಿಂಗಳು ಅಧಿಕಾರದಲ್ಲಿದ್ದಜೆಡಿಎಸ್–ಕಾಂಗ್ರೆಸ್ ಮೈತ್ರಿ ಸರ್ಕಾರವು ಮಂಗಳವಾರ ಪತನಗೊಂಡಿತು.

‘ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ಒಳಗಿನ ಮತ್ತು ಹೊರಗಿನ ಪಟ್ಟಭದ್ರ ಹಿತಾಸಕ್ತಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಅಧಿಕಾರದ ಹಾದಿಗೆ ಮೈತ್ರಿ ಸರ್ಕಾರ ಒಂದು ಅಡ್ಡಿ ಎಂದೇ ಅವರು ಭಾವಿಸಿದ್ದರು. ಕೊನೆಗೂ ಅವರ ದುರಾಸೆಗೇ ಗೆಲುವಾಯಿತು. ಆದರೆ ಪ್ರಜಾಪ್ರಭುತ್ವ, ಪ್ರಾಮಾಣಿಕತೆ ಮತ್ತು ಕರ್ನಾಟಕದ ಜನರು ಸೋತು ಹೋದರು’ ಎಂದು ರಾಹುಲ್ ಗಾಂಧಿ ಟ್ವೀಟ್‌ನಲ್ಲಿ ಹೇಳಿದ್ದಾರೆ.

ADVERTISEMENT

ಮೈತ್ರಿ ಸರ್ಕಾರ ಪತನದ ಕುರಿತು ಪ್ರತಿಕ್ರಿಯಿಸಿರುವ ಪ್ರಿಯಾಂಕಾ ಗಾಂಧಿ ವದ್ರಾ, ‘ಎಲ್ಲವನ್ನೂ ನಮ್ಮ ಮುಷ್ಟಿಯಲ್ಲಿ ಹಿಡಿದಿಟ್ಟುಕೊಳ್ಳಲು ಆಗುವುದಿಲ್ಲ,ಎಲ್ಲವೂ ಸಿಗುವುದಿಲ್ಲ, ಎಲ್ಲರನ್ನೂ ಹೆದರಿಸಲು ಆಗುವುದಿಲ್ಲ. ಕಾಲಾನುಕ್ರಮದಲ್ಲಿ ಎಲ್ಲ ಸುಳ್ಳುಗಳೂ ಹೊರಗೆ ಬರುತ್ತವೆ’ ಎಂದು ಪ್ರತಿಕ್ರಿಯಿಸಿದ್ದರು.

‘ಇಷ್ಟೆಲ್ಲಾ ಆಗುವವರೆಗೂ ದೇಶದ ಜನರು ಅವರ (ಬಿಜೆಪಿ ನಾಯಕರ) ಅನಿರ್ಬಂಧಿತ ಭ್ರಷ್ಟಾಚಾರ, ಜನರ ಹಿತಾಸಕ್ತಿ ಕಾಪಾಡುವ ಸಾಂವಿಧಾನಿಕ ಸಂಸ್ಥೆಗಳ ಶಕ್ತಿಯನ್ನುವ್ಯವಸ್ಥಿತವಾಗಿ ಹಾಳುಮಾಡುವ ದುಸ್ಸಾಹಸ,ಹತ್ತಾರು ದಶಕಗಳ ತ್ಯಾಗ ಮತ್ತು ಬಲಿದಾನದಿಂದ ವಿಕಸನಗೊಂಡಿರುವ ಪ್ರಜಾಪ್ರಭುತ್ವವನ್ನು ಶಕ್ತಿಹೀನಗೊಳಿಸುವ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ’ ಎಂದು ಪ್ರಿಯಾಂಕಾ ಹೇಳಿದ್ದಾರೆ.

‘ಪ್ರಜಾವಾಣಿ’ ಸುದ್ದಿ, ಬರಹಗಳಲ್ಲಿ ರಾಜಕೀಯ ಬೆಳವಣಿಗೆಗಳ ಸಮಗ್ರ ನೋಟ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.