ADVERTISEMENT

ಜೈಲಿನಲ್ಲಿ ಎನ್‌ಎಸ್‌ಯುಐ ನಾಯಕರ ಭೇಟಿಯಾದ ರಾಹುಲ್ ಗಾಂಧಿ: ಸರ್ಕಾರದ ವಿರುದ್ಧ ಕಿಡಿ

​ಪ್ರಜಾವಾಣಿ ವಾರ್ತೆ
Published 8 ಮೇ 2022, 4:46 IST
Last Updated 8 ಮೇ 2022, 4:46 IST
ಜೈಲಿನಲ್ಲಿ ಎನ್‌ಎಸ್‌ಯುಐ ನಾಯಕರ ಭೇಟಿಯಾದ ರಾಹುಲ್ ಗಾಂಧಿ - ಐಎಎನ್‌ಎಸ್ ಚಿತ್ರ
ಜೈಲಿನಲ್ಲಿ ಎನ್‌ಎಸ್‌ಯುಐ ನಾಯಕರ ಭೇಟಿಯಾದ ರಾಹುಲ್ ಗಾಂಧಿ - ಐಎಎನ್‌ಎಸ್ ಚಿತ್ರ   

ಹೈದರಾಬಾದ್: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಇಲ್ಲಿನ ಚಂಚಲಗುಡ ಜೈಲಿಗೆ ತೆರಳಿ ಎನ್‌ಎಸ್‌ಯುಐ (ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ/ ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕ) ನಾಯಕರನ್ನು ಭೇಟಿ ಮಾಡಿದ್ದಾರೆ.

‘ಕಾಂಗ್ರೆಸ್ ಪಕ್ಷವು ಅನ್ಯಾಯದ ವಿರುದ್ಧ ನಿಸ್ವಾರ್ಥ ಹೋರಾಟ ನಡೆಸುತ್ತಿರುವ ಕಾರ್ಯಕರ್ತರಿಗೆ ಸಮರ್ಪಿತವಾಗಿದೆ. ನಾನು ಸದಾ ಅವರೊಂದಿಗೆ ಇರಲಿದ್ದೇನೆ. ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದ ವಿದ್ಯಾರ್ಥಿ ನಾಯಕರನ್ನು ಟಿಆರ್‌ಎಸ್ ಸರ್ಕಾರ ಅಕ್ರಮವಾಗಿ ಬಂಧಿಸಿದೆ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಓಸ್ಮಾನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಜತೆ ರಾಹುಲ್ ಗಾಂಧಿ ಸಂವಾದ ಏರ್ಪಡಿಸಲು ಇತ್ತೀಚೆಗೆ ಕಾಂಗ್ರೆಸ್ ಮುಂದಾಗಿತ್ತು. ಆದರೆ, ಕ್ಯಾಂಪಸ್‌ನಲ್ಲಿ ರಾಜಕೀಯ ಸಭೆಗಳನ್ನು ನಿಷೇಧಿಸುವ ನಿಯಮಗಳನ್ನು ಮತ್ತು ಕಾರ್ಯಕಾರಿ ಮಂಡಳಿಯ ನಿರ್ಣಯದ ಕಾರಣ ನೀಡಿ ವಿಶ್ವವಿದ್ಯಾಲಯ ಅನುಮತಿ ನಿರಾಕರಿಸಿತ್ತು.

ರಾಹುಲ್ ಜತೆ ಸಂವಾದಕ್ಕೆ ಅವಕಾಶ ನೀಡಬೇಕೆಂದು ಆಗ್ರಹಿಸಿ ಕುಲಪತಿ ಕಚೇರಿಯ ಎದುರು ಎನ್‌ಎಸ್‌ಯುಐ ಪ್ರತಿಭಟನೆ ಕಳೆದ ಭಾನುವಾರ ನಡೆಸಿತ್ತು. ಇದೇ ವೇಳೆ, ಎನ್‌ಎಸ್‌ಯುಐ ರಾಜ್ಯ ಘಟಕದ ಅಧ್ಯಕ್ಷ ಬಲ್ಮೂರ್ ವೆಂಕಟ್ ಸೇರಿದಂತೆ 18 ಮಂದಿ ಕಾರ್ಯಕರ್ತರನ್ನು ಬಂಧಿಸಲಾಗಿತ್ತು.

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ ಅವರು ಒತ್ತಡ ಹೇರಿರುವುದೇ ರಾಹುಲ್ ಸಂವಾದಕ್ಕೆ ಅನುಮತಿ ನಿರಾಕರಿಸಲು ಕಾರಣ ಎಂದು ಕಾಂಗ್ರೆಸ್‌ ಆರೋಪಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.