ರಾಹುಲ್ ಗಾಂಧಿ
ನವದೆಹಲಿ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ‘ಮೇಕ್ ಇನ್ ಇಂಡಿಯಾ’ ಯೋಜನೆ ಬಗ್ಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ. ಈ ಯೋಜನೆಯಡಿ ಕೇವಲ ಜೋಡಿಸುವ ಕೆಲಸ ನಡೆಯುತ್ತಿದೆ, ಉತ್ಪಾದನೆ ನಡೆಯುತ್ತಿಲ್ಲ. ಜೋಡಣಾ ವಲಯದಿಂದ ಹೊರಬರಬೇಕಿದ್ದರೆ ಅಮೂಲಾಗ್ರ ಬದಲಾವಣೆ ಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಉತ್ಪಾದನೆಯಲ್ಲಿ ಭಾರತ ಸ್ವಾವಲಂಬಿಯಾಗುವವರೆಗೂ, ಉದ್ಯೋಗದ ಬಗ್ಗೆ ಮಾತನಾಡುವುದು, ಅಭಿವೃದ್ಧಿ, ಮೇಕ್ ಇನ್ ಇಂಡಿಯಾಗೆ ಅರ್ಥವಿಲ್ಲ ಎಂದು ಅವರು ಹೇಳಿದ್ದಾರೆ.
‘ಭಾರತವು ಜೋಡಣಾ ವಲಯವನ್ನು ಮೀರಿ ನಿಜವಾದ ಉತ್ಪಾದನಾ ಶಕ್ತಿಯಾಗಲು, ಚೀನಾದೊಂದಿಗೆ ಸಮಾನವಾಗಿ ಸ್ಪರ್ಧಿಸಲು ಅಮೂಲಾಗ್ರ ಬದಲಾವಣೆಯ ಅಗತ್ಯವಿದೆ’ ಎಂದು ಅವರು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
‘ಭಾರತದಲ್ಲಿ ತಯಾರಾಗುವ ಹೆಚ್ಚಿನ ಟಿವಿಗಳ ಶೇ 80 ಘಟಕಗಳು ಚೀನಾದಿಂದ ಬರುತ್ತವೆ ಎಂದು ನಿಮಗೆ ತಿಳಿದಿದೆಯೇ? 'ಮೇಕ್ ಇನ್ ಇಂಡಿಯಾ' ಹೆಸರಿನಲ್ಲಿ, ನಾವು ಕೇವಲ ಜೋಡಣೆ ಮಾಡುತ್ತಿದ್ದೇವೆ, ಉತ್ಪಾದನೆ ಮಾಡುತ್ತಿಲ್ಲ. ಐಫೋನ್‌ಗಳಿಂದ ಟಿವಿಗಳವರೆಗೆ, ಬಿಡಿಭಾಗಗಳು ವಿದೇಶದಿಂದ ಬರುತ್ತವೆ, ನಾವು ಅವುಗಳನ್ನು ಜೋಡಿಸುತ್ತೇವೆ’ ಎಂದು ರಾಹುಲ್ ಬರೆದುಕೊಂಡಿದ್ದಾರೆ.
ಸಣ್ಣ ಉದ್ಯಮಿಗಳು ಉತ್ಪಾದಿಸಲು ಬಯಸುತ್ತಾರೆ, ಆದರೆ ಅದಕ್ಕೆ ಬೇಕಾದ ಸರಿಯಾದ ನೀತಿ ಅಥವಾ ಬೆಂಬಲವಿಲ್ಲ. ಭಾರಿ ಪ್ರಮಾಣದ ತೆರಿಗೆಗಳು ಮತ್ತು ಆಯ್ದ ಕಾರ್ಪೊರೇಟ್‌ಗಳ ಏಕಸ್ವಾಮ್ಯ ದೇಶದ ಉದ್ಯಮವನ್ನು ಆವರಿಸಿಕೊಂಡಿವೆ ಎಂದು ಅವರು ಹೇಳಿದ್ದಾರೆ.
ಗ್ರೇಟರ್ ನೋಯ್ಡಾದಲ್ಲಿ ಟಿವಿಗಳನ್ನು ಜೋಡಿಸುವ ಸ್ಥಳೀಯ ಘಟಕಕ್ಕೆ ಭೇಟಿ ನೀಡಿದ್ದ ವಿಡಿಯೊವನ್ನು ಹಂಚಿಕೊಂಡು ಅವರನ್ನು ಇದನ್ನು ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.