ADVERTISEMENT

ಸಂವಿಧಾನದ ರಕ್ಷಣೆಗಾಗಿ ಜನರು ಮತದಾನದ ಹಕ್ಕನ್ನು ರಕ್ಷಿಸಿಕೊಳ್ಳಬೇಕು: ರಾಹುಲ್

ಪಿಟಿಐ
Published 26 ಆಗಸ್ಟ್ 2025, 14:05 IST
Last Updated 26 ಆಗಸ್ಟ್ 2025, 14:05 IST
<div class="paragraphs"><p>ರಾಹುಲ್ ಗಾಂಧಿ</p></div>

ರಾಹುಲ್ ಗಾಂಧಿ

   

(ಪಿ)

ಮಧುಬನಿ (ಬಿಹಾರ): 'ದೇಶದ ಸಂವಿಧಾನದ ರಕ್ಷಣೆಗಾಗಿ ಜನರು ತಮ್ಮ ಮತದಾನದ ಹಕ್ಕನ್ನು ರಕ್ಷಿಸಿಕೊಳ್ಳಬೇಕು' ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು (ಮಂಗಳವಾರ) ಕರೆ ನೀಡಿದ್ದಾರೆ.

ADVERTISEMENT

ಬಿಹಾರದಲ್ಲಿ ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರಂಭಿಸಿರುವ 'ಮತದಾರರ ಅಧಿಕಾರ ಯಾತ್ರೆ' ಇಂದು 10ನೇ ದಿನಕ್ಕೆ ಕಾಲಿಟ್ಟಿದೆ.

ಈ ಸಂದರ್ಭದಲ್ಲಿ ಮಧುಬನಿ ಜಿಲ್ಲೆಯಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. 'ಚುನಾವಣಾ ಆಯೋಗದ ಮೂಲಕ ಬಿಜೆಪಿ ಮತ ಕಳ್ಳತನ ಮಾಡುತ್ತಿದೆ. ಆದರೆ ಬಿಜೆಪಿ ಹಾಗೂ ಚುನಾವಣಾ ಆಯೋಗದ ಕಪಟತನವನ್ನು ಬಿಹಾರದ ಎಸ್‌ಐಆರ್ ಬಯಲು ಮಾಡಿದೆ. ಜನರು ಬಿಜೆಪಿ ನಾಯಕರನ್ನು 'ವೋಟ್ ಚೋರ್' ಎಂದು ಕರೆಯಲು ಪ್ರಾರಂಭಿಸಿದ್ದಾರೆ' ಎಂದು ಹೇಳಿದ್ದಾರೆ.

'ತಮ್ಮ ಮತದಾನದ ಹಕ್ಕುಗಳನ್ನು ಕಳೆದುಕೊಂಡರೆ ಸಂವಿಧಾನವನ್ನು ರಕ್ಷಿಸಲು ಸಾಧ್ಯವಿಲ್ಲ ಎಂಬುದನ್ನು ಜನರು ಅರಿತುಕೊಳ್ಳಬೇಕು. ಬಿಹಾರದ ಮತದಾರರ ಪಟ್ಟಿಯಿಂದ 65 ಲಕ್ಷ ಮತದಾರರನ್ನು ಚುನಾವಣಾ ಆಯೋಗವು ಅಳಿಸಿ ಹಾಕಿದೆ. ಬಿಜೆಪಿಗೆ ನೆರವಾಗಲು ಈಗ 65 ಲಕ್ಷ ಮತದಾರರನ್ನು ಸೇರಿಸಲಾಗುತ್ತಿದೆ' ಎಂದು ಅವರು ಆರೋಪಿಸಿದ್ದಾರೆ.

'ಮುಂದಿನ 40-50 ವರ್ಷಗಳ ಕಾಲ ಬಿಜೆಪಿಯೇ ಅಧಿಕಾರದಲ್ಲಿ ಮುಂದುವರಿಯಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳುತ್ತಾರೆ. ಮತ ಕಳ್ಳತನ ಮಾಡಿದ್ದರಿಂದ ಅವರು ಹಾಗೆ ಹೇಳಿದ್ದಾರೆ ಎಂಬುದೀಗ ನನಗೆ ಅರಿವಾಗಿದೆ. ಮತ ಕಳ್ಳತನವು ಗುಜರಾತ್‌ನಿಂದಲೇ ಪ್ರಾರಂಭವಾಗಿದೆ' ಎಂದು ರಾಹುಲ್ ದೂರಿದ್ದಾರೆ.

'ಪ್ರಧಾನಿ ನರೇಂದ್ರ ಮೋದಿ ಅಥವಾ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ ಕಳ್ಳತನದ ಕುರಿತು ಒಂದೇ ಒಂದು ಮಾತನ್ನು ಆಡಿಲ್ಲ. ಕಳ್ಳ ಸಿಕ್ಕಿಬಿದ್ದಾಗ ಸುಮ್ಮನಾಗಿರುತ್ತಾನೆ. ಬಿಜೆಪಿ ನಾಯಕರು ಇದನ್ನೇ ಮಾಡುತ್ತಿದ್ದಾರೆ' ಎಂದು ಅವರು ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.