ADVERTISEMENT

ವಿದ್ಯಾರ್ಥಿವೇತನ ವಿಳಂಬ, ಹಾಸ್ಟೆಲ್‌ ಪರಿಸ್ಥಿತಿ ಕುರಿತು ಪ್ರಧಾನಿಗೆ ರಾಹುಲ್ ಪತ್ರ

ಪಿಟಿಐ
Published 11 ಜೂನ್ 2025, 6:23 IST
Last Updated 11 ಜೂನ್ 2025, 6:23 IST
   

ನವದೆಹಲಿ: ಎಸ್‌ಟಿ/ಎಸ್‌ಸಿ, ಒಬಿಸಿ, ಇಬಿಸಿ ಮತ್ತು ಅಲ್ಪಸಂಖ್ಯಾತ ವಸತಿ ನಿಲಯಗಳಲ್ಲಿ ಶೋಚನೀಯ ಪರಿಸ್ಥಿತಿ ಮತ್ತು ವಂಚಿತ ಸಮುದಾಯಗಳ ವಿದ್ಯಾರ್ಥಿಗಳಿಗೆ ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನ ನೀಡುವಲ್ಲಿ ವಿಳಂಬವನ್ನು ಟೀಕಿಸಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ಈ ಎರಡು ಸಮಸ್ಯೆಗಳನ್ನು ತಕ್ಷಣ ಪರಿಹರಿಸುವಂತೆ ಒತ್ತಾಯಿಸಿರುವ ಅವರು, ವಂಚಿತ ಸಮುದಾಯಗಳ ಶೇ 90ರಷ್ಟು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಇದು ಅಡ್ಡಿಯಾಗಲಿದೆ ಎಂದು ಹೇಳಿದ್ದಾರೆ.

‘ಮೊದಲನೆಯದಾಗಿ, ದೇಶದಲ್ಲಿ ದಲಿತ, ಎಸ್‌ಟಿ, ಇಬಿಸಿ, ಒಬಿಸಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ವಸತಿ ನಿಲಯಗಳಲ್ಲಿ ಪರಿಸ್ಥಿತಿ ಶೋಚನೀಯವಾಗಿವೆ. ಇತ್ತೀಚೆಗೆ ಬಿಹಾರದ ದರ್ಭಾಂಗದಲ್ಲಿರುವ ಅಂಬೇಡ್ಕರ್ ವಸತಿ ನಿಲಯಕ್ಕೆ ಭೇಟಿ ನೀಡಿದ್ದ ವೇಳೆ ಅಲ್ಲಿನ ವಿದ್ಯಾರ್ಥಿಗಳು ಕೊಠಡಿ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಸ್ವಚ್ಛವಿಲ್ಲದ ಶೌಚಾಲಯ ಮತ್ತು ಇಂಟರ್‌ನೆಟ್‌ ವ್ಯವಸ್ಥೆ ಇಲ್ಲದಿರುವುದರ ಬಗ್ಗೆ ದೂರು ನೀಡಿದ್ದರು’ ಎಂದು ರಾಹುಲ್‌ ಪತ್ರದಲ್ಲಿ ತಿಳಿಸಿದ್ದಾರೆ.

ADVERTISEMENT

‘ಎರಡನೆಯದಾಗಿ, ವಂಚಿತ ಸಮುದಾಯಗಳ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಸಿಗುತ್ತಿಲ್ಲ. ಬಿಹಾರದಲ್ಲಿ ಮೂರು ವರ್ಷಗಳಿಂದ ವಿದ್ಯಾರ್ಥಿವೇತನ ಪೋರ್ಟಲ್ ಕಾರ್ಯನಿರ್ವಹಿಸುತ್ತಿಲ್ಲ. 2021-22ರಲ್ಲಿ ಯಾವುದೇ ವಿದ್ಯಾರ್ಥಿಗೆ ವಿದ್ಯಾರ್ಥಿವೇತನ ಸಿಗಲಿಲ್ಲ’ ಎಂದು ಹೇಳಿದ್ದಾರೆ.

‘ಈ ಸಮಸ್ಯೆಗಳು ಬಿಹಾರದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿಯೇ ಇದೆ. ಈ ವೈಫಲ್ಯಗಳನ್ನು ಸರಿಪಡಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

‘ವಂಚಿತ ಸಮುದಾಯಗಳ ಮಕ್ಕಳು ಪ್ರಗತಿ ಹೊಂದದ ಹೊರತು ಭಾರತ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ನಿಮ್ಮ ಸಕಾರಾತ್ಮಕ ಪ್ರತಿಕ್ರಿಯೆಗಾಗಿ ಎದುರು ನೋಡುತ್ತಿದ್ದೇನೆ" ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.