ADVERTISEMENT

ರೈಲ್ವೆ ಪ್ರಯಾಣಿಕರಿಗೆ ಪೂರೈಸುವ ಕುಡಿಯುವ ನೀರು - ವರದಿ ನೀಡಲು ಹೈಕೋರ್ಟ್ ಸೂಚನೆ

ದೆಹಲಿ ಹೈಕೋರ್ಟ್‌ನಿಂದ ರೈಲ್ವೆ ಇಲಾಖೆಗೆ ಸೂಚನೆ

ಪಿಟಿಐ
Published 12 ಅಕ್ಟೋಬರ್ 2022, 16:11 IST
Last Updated 12 ಅಕ್ಟೋಬರ್ 2022, 16:11 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ನವದೆಹಲಿ: ರೈಲ್ವೆ ಪ್ರಯಾಣಿಕರಿಗೆ ಪೂರೈಕೆ ಮಾಡಲಾಗುತ್ತಿರುವ ಕುಡಿಯುವ ನೀರಿನ ಗುಣಮಟ್ಟದ ಕುರಿತ ಹೊಸ ವರದಿಯೊಂದನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ದೆಹಲಿ ಹೈಕೋರ್ಟ್‌ ಬುಧವಾರ ರೈಲ್ವೆ ಇಲಾಖೆಗೆ ಸೂಚಿಸಿದೆ.

ಪ್ರಯಾಣಿಕರಿಗೆ ಕಲುಷಿತ ಕುಡಿಯುವ ನೀರು ಒದಗಿಸಲಾಗುತ್ತಿದೆ. ಕ್ಲೋರಿನೇಷನ್‌ ಘಟಕಗಳ ನಿರ್ಮಾಣಕ್ಕಾಗಿ ನೀಡಿರುವ ಗುತ್ತಿಗೆಗಳಲ್ಲಿ ಅವ್ಯವಹಾರ ನಡೆದಿದೆ. ಈ ಸಂಬಂಧ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ತನಿಖೆ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸೆಂಟರ್‌ ಫಾರ್‌ ಪಬ್ಲಿಕ್‌ ಇಂಟ್ರೆಸ್ಟ್‌ ಲಿಟಿಗೇಷನ್‌ ಎಂಬ ಸ್ವಯಂ ಸೇವಾ ಸಂಸ್ಥೆಯು (ಎನ್‌ಜಿಒ) ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.

ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮಣಿಯಂ ಪ್ರಸಾದ್‌ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠವು ಬುಧವಾರ ಇದರ ವಿಚಾರಣೆ ನಡೆಸಿತು.

ADVERTISEMENT

‘ರೈಲ್ವೆ ಇಲಾಖೆಯು 2019ರ ಅಕ್ಟೋಬರ್‌ ಬಳಿಕ ಪ್ರಯಾಣಿಕರಿಗೆ ಪೂರೈಸಲಾಗುತ್ತಿರುವ ಕುಡಿಯುವ ನೀರಿನ ಗುಣಮಟ್ಟದ ಕುರಿತ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ’ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.

ಈ ಸಂಬಂಧ ಆರು ವಾರಗಳ ಒಳಗೆ ಹೊಸ ವರದಿಯೊಂದನ್ನು ಸಲ್ಲಿಸುವಂತೆ ರೈಲ್ವೆ ಇಲಾಖೆಗೆ ಸೂಚಿಸಿದ ನ್ಯಾಯಪೀಠವು ವಿಚಾರಣೆಯನ್ನು 2023ರ ಫೆಬ್ರುವರಿ 15ಕ್ಕೆ ಮುಂದೂಡಿತು.

ಗುಣಮಟ್ಟದ ಸೌಲಭ್ಯ ಒದಗಿಸದಿದ್ದರೂ ದರ ಹೆಚ್ಚಳ ಮಾಡಿರುವ ಇಲಾಖೆಯ ಕ್ರಮವನ್ನು ಪ್ರಶ್ನಿಸಿದ ನ್ಯಾಯಪೀಠ, ಪ್ರಯಾಣಿಕರಿಗೆ ಕಲುಷಿತ ಕುಡಿಯುವ ನೀರು ಪೂರೈಸುವುದನ್ನು ನಿಲ್ಲಿಸುವಂತೆ ಸೂಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.