ADVERTISEMENT

‘ಎನ್‌ಡಿಎ ಆಡಳಿತಾವಧಿಯಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ರೈಲ್ವೆ ಯೋಜನೆ’

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 13:58 IST
Last Updated 20 ಸೆಪ್ಟೆಂಬರ್ 2020, 13:58 IST
ಪಿಯೂಶ್‌‌ ಗೋಯಲ್‌ 
ಪಿಯೂಶ್‌‌ ಗೋಯಲ್‌    

ನವದೆಹಲಿ: ಯುಪಿಎ ಆಡಳಿತಾವಧಿಗೆ ಹೋಲಿಸಿದರೆ, ಎನ್‌ಡಿಎ ಆಡಳಿತಾವಧಿಯಲ್ಲಿ ಕರ್ನಾಟಕದಲ್ಲಿ ಶೇ 34ರಷ್ಟು ಹೆಚ್ಚು ರೈಲ್ವೆ ಯೋಜನೆಗಳು ಅನುಷ್ಠಾನಗೊಂಡಿವೆ ಎಂದು ರೈಲ್ವೆ ಸಚಿವ ಪಿಯೂಶ್‌‌ ಗೋಯಲ್‌ ಲೋಕಸಭೆಯಲ್ಲಿ ತಿಳಿಸಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆ ಅವರ ಪ್ರಶ್ನೆಗೆ ಉತ್ತರಿಸಿದ ಗೋಯಲ್‌, ‘ಯುಪಿಎ ಸರ್ಕಾರಕ್ಕೆ ಹೋಲಿಸಿದರೆ, ಕರ್ನಾಟಕದಲ್ಲಿನ ರೈಲ್ವೆ ಯೋಜನೆಗಳಿಗೆ ಎನ್‌ಡಿಎ ಸರ್ಕಾರವೇ ಹೆಚ್ಚಿನ ಹಣಕಾಸು ನೆರವನ್ನು ನೀಡಿದೆ. 2009–14ರ ಅವಧಿಯಲ್ಲಿ ಪ್ರತಿ ವರ್ಷಕ್ಕೆ ಸರಾಸರಿ 113 ಕಿ.ಮೀ ಎಂಬಂತೆ ಒಟ್ಟು 565 ಕಿ.ಮೀ ರೈಲು ಮಾರ್ಗದ ನಿರ್ಮಾಣ ಪೂರ್ಣಗೊಂಡಿತ್ತು. ಇದರಲ್ಲಿ 206 ಕಿ.ಮೀ. ಹೊಸ ರೈಲು ಮಾರ್ಗ, 185 ಕಿ.ಮೀ ಗೇಜ್‌ ಪರಿವರ್ತನೆ‌, 174 ಕಿ.ಮೀ. ಜೋಡಿ ಹಳಿ ನಿರ್ಮಾಣ ಒಳಗೊಂಡಿತ್ತು. ಅದೇ, 2014–20ರ ಅವಧಿಯಲ್ಲಿ 907 ಕಿ.ಮೀ. ರೈಲು ಮಾರ್ಗದ ನಿರ್ಮಾಣವಾಗಿದೆ. ಇದರಲ್ಲಿ 253 ಕಿ.ಮೀ ಹೊಸ ಮಾರ್ಗ, 654 ಕಿ.ಮೀ ಜೋಡಿ ಹಳಿ ನಿರ್ಮಾಣವಾಗಿದೆ’ ಎಂದರು.

‘2020–21ನೇ ಆರ್ಥಿಕ ವರ್ಷದಲ್ಲಿ ಕರ್ನಾಟಕದಲ್ಲಿ ರೈಲ್ವೆ ಯೋಜನೆಗಳಿಗೆ ₹4,220 ಕೋಟಿ ಬಜೆಟ್ ಯೋಜನೆ ರೂಪಿಸಲಾಗಿದೆ. 2020 ಏ.1ರಂತೆ ಕರ್ನಾಟಕದಲ್ಲಿ ₹49,536 ಕೋಟಿ ವೆಚ್ಚದಲ್ಲಿ 4,529 ಕಿ.ಮೀ ಉದ್ದದ 36 ಯೋಜನೆಗಳು ಪ್ರಗತಿಯಲ್ಲಿವೆ’ ಎಂದು ಗೋಯಲ್‌ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.