ADVERTISEMENT

ಸುರಕ್ಷತಾ ವಿಭಾಗ ಹೊರತುಪಡಿಸಿ ಉಳಿದೆಲ್ಲ ನೇಮಕಾತಿಗಳ ಸ್ಥಗಿತಕ್ಕೆ ರೈಲ್ವೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 3 ಜುಲೈ 2020, 13:30 IST
Last Updated 3 ಜುಲೈ 2020, 13:30 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ನವದೆಹಲಿ: ಕೋವಿಡ್‌–19 ಪಿಡುಗಿನ ಕಾರಣದಿಂದಾಗಿ ಆದಾಯ ಕೊರತೆ ಎದುರಿಸುತ್ತಿರುವ ಭಾರತೀಯ ರೈಲ್ವೆಯು, ತಾತ್ಕಾಲಿಕವಾಗಿ ಹೊಸ ಹುದ್ದೆಗಳ ಸೃಷ್ಟಿ ಮತ್ತು ಅನಗತ್ಯ ನೇಮಕಾತಿಗಳಿಗೆ ಕಡಿವಾಣ ಹಾಕಲು ನಿರ್ಧರಿಸಿದೆ.

ಸುರಕ್ಷತಾ ವಿಭಾಗವನ್ನು ಹೊರತುಪಡಿಸಿ ಹೊಸ ಹುದ್ದೆಗಳನ್ನು ಸೃಷ್ಟಿಸದಂತೆ ಸೂಚಿಸಿ ಆಯಾ ವಲಯದ ಪ್ರಧಾನ ವ್ಯವಸ್ಥಾಪಕರಿಗೆ ರೈಲ್ವೆ ಮಂಡಳಿ ಮಂಗಳವಾರ ಪತ್ರ ಬರೆದಿದೆ. ‘ಕಳೆದ ಎರಡು ವರ್ಷಗಳಲ್ಲಿ ಸೃಷ್ಟಿಸಲಾದ ಹುದ್ದೆಗಳಿಗೆ ನೇಮಕಾತಿ ಆಗದೇ ಉಳಿದಿದ್ದರೆ, ಅವುಗಳನ್ನು ಸ್ಥಗಿತಗೊಳಿಸಿ. ಸುರಕ್ಷತಾ ವಿಭಾಗ ಹೊರತುಪಡಿಸಿ ಪ್ರಸ್ತುತ ಇರುವ ಖಾಲಿ ಹುದ್ದೆಗಳ ಪೈಕಿ ಶೇ 50ರನ್ನು ರದ್ದುಪಡಿಸಿ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಆದರೆ ಈ ಆದೇಶವು 2018ರಲ್ಲಿ ಘೋಷಿಸಲಾಗಿದ್ದ ತಾಂತ್ರಿಕ ಮತ್ತು ಇತರೆ ವಿಭಾಗಗಳಲ್ಲಿ ಇದ್ದ ಖಾಲಿ ಹುದ್ದೆಗಳಿಗೆ ನಡೆಯುತ್ತಿರುವ ನೇಮಕಾತಿಗೆ ಅನ್ವಯವಾಗುವುದಿಲ್ಲ. ಈ ಪ್ರಕ್ರಿಯೆ ಅಂತ್ಯವಾಗಿದ್ದು, 64,317 ಸಹಾಯಕ ಲೊಕೊ ಪೈಲಟ್‌ ಹಾಗೂ ತಾಂತ್ರಿಕ ಸಿಬ್ಬಂದಿಗೆ ನೇಮಕಾತಿ ಪತ್ರವನ್ನೂ ಕಳುಹಿಸಲಾಗುತ್ತಿದೆ. ಕೋವಿಡ್‌–19 ನಿಂದ ಉಂಟಾಗಿರುವ ಪರಿಸ್ಥಿತಿ ತಿಳಿಗೊಂಡ ನಂತರ 35,208 ತಾಂತ್ರಿಕೇತರ ಹುದ್ದೆಗಳ ನೇಮಕಾತಿಗೆ ಪರೀಕ್ಷೆ ನಡೆಸಲು ಇಲಾಖೆ ನಿರ್ಧರಿಸಿದೆ.

ADVERTISEMENT

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮಾರ್ಚ್‌ 24ರಿಂದ ದೇಶದಾದ್ಯಂತ ಪ್ಯಾಸೆಂಜರ್‌ ರೈಲು ಸೇವೆ ಸ್ಥಗಿತಗೊಂಡಿದ್ದು, ಇಲಾಖೆಗೆ ಆದಾಯ ಖೋತ ಆಗುತ್ತಿದೆ. ಹೀಗಾಗಿಈಗಾಗಲೇ ಅನಗತ್ಯ ಖರ್ಚು–ವೆಚ್ಚಗಳಿಗೆ ಕಡಿವಾಣ ಹಾಕಲು ರೈಲ್ವೆ ಮಂಡಳಿಯು ವಲಯಗಳಿಗೆ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.