ADVERTISEMENT

ಜಮ್ಮುವಿನಲ್ಲಿ 3 ದಿನಗಳಿಂದ ಸತತ ಮಳೆ, ಹಿಮಪಾತ: ಇಬ್ಬರ ಸಾವು, 12 ಮಂದಿ ರಕ್ಷಣೆ

ಪಿಟಿಐ
Published 28 ಫೆಬ್ರುವರಿ 2025, 6:49 IST
Last Updated 28 ಫೆಬ್ರುವರಿ 2025, 6:49 IST
   

ಜಮ್ಮು: ಸತತ ಮೂರನೇ ದಿನವೂ ಜಮ್ಮುವಿನ ಹಲವೆಡೆ ನಿರಂತರ ಮಳೆ ಸುರಿಯುತ್ತಿದ್ದು, ಮಳೆ ಸಂಬಂಧಿತ ಅವಘಡದಲ್ಲಿ ಮಹಿಳೆ ಮತ್ತು ಆಕೆಯ ಮಗ ಸಾವಿಗೀಡಾಗಿದ್ದಾರೆ. ಉಕ್ಕಿ ಹರಿಯುತ್ತಿರುವ ಜಲಮೂಲಗಳಿಂದ 12 ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎತ್ತರದ ಪ್ರದೇಶಗಳಲ್ಲಿ ಭಾರೀ ಹಿಮಪಾತವಾಗುತ್ತಿದ್ದು, ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ವಿವಿಧ ರಸ್ತೆಗಳ ಸಂಚಾರ ಬಂದ್ ಆಗಿದೆ ಎಂದು ಅವರು ಹೇಳಿದ್ದಾರೆ.

ಶುಕ್ರವಾರ ಮುಂಜಾನೆ ಉಧಂಪುರ ಜಿಲ್ಲೆಯ ಮೌಂಗಾರಿ ಬಳಿ ಗುಡ್ಡದಿಂದ ಬಂಡೆಯೊಂದು ಉರುಳಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಶಾನೋ ದೇವಿ (50) ಮತ್ತು ಅವರ ಮಗ ರಘು (25) ಸಾವಿಗೀಡಾಗಿದ್ದಾರೆ.

ADVERTISEMENT

ಶುಕ್ರವಾರ ಮುಂಜಾನೆ ಕಥುವಾ ಜಿಲ್ಲೆಯ ರಾಜ್‌ಬಾಗ್ ಪ್ರದೇಶದ ಉಜ್ ನದಿಯಲ್ಲಿ ಸಿಲುಕಿದ್ದ ಕನಿಷ್ಠ 11 ವಲಸೆ ಕಾರ್ಮಿಕರನ್ನು ಪೊಲೀಸ್ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಜಂಟಿ ತಂಡ ರಕ್ಷಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಮಗಾರಿ ನಡೆಯುವ ಸ್ಥಳಕ್ಕೆ ಹೊಂದಿಕೊಂಡಂತೆ ಶೆಡ್‌ನಲ್ಲಿ ಕೂಲಿಕಾರರು ವಾಸ ಮಾಡುತ್ತಿದ್ದು, ನಿರಂತರ ಮಳೆಯಿಂದ ನೀರಿನ ಮಟ್ಟ ಏರಿಕೆಯಾಗಿ ಅವರ ಜೀವಕ್ಕೆ ಅಪಾಯ ಎದುರಾಗಿತ್ತು ಎಂದು ಅವರು ಹೇಳಿದ್ದಾರೆ.

ಇಂದು ಬೆಳಗ್ಗೆ ಜಮ್ಮುವಿನ ನಿಕಿ ತಾವಿ ಪ್ರದೇಶದಲ್ಲಿ ಪೊಲೀಸರು ಮತ್ತು ಎಸ್‌ಡಿಆರ್‌ಎಫ್ ಸಿಬ್ಬಂದಿ ಜಂಟಿ ಕಾರ್ಯಾಚರಣೆಯಲ್ಲಿ ಡಂಪರ್‌ನ ಚಾಲಕನನ್ನು ರಕ್ಷಿಸಿದ್ದಾರೆ.

ಮುಂಜಾನೆ 5.40ರ ಸುಮಾರಿಗೆ ತಾವಿ ನದಿಯ ನೀರಲ್ಲಿ ಸಿಲುಕಿದ್ದ ಗೋಲೆ-ಗುಜ್ರಾಲ್ ನಿವಾಸಿ ಚಾಲಕ ಮೋಹನ್ ಲಾಲ್ ಅವರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಮ್‌ಸೂ ಮತ್ತು ಖಾಜಿಗುಂಡ್ ನಡುವೆ ಹಿಮ ಆವರಿಸಿದ್ದು, ನಶ್ರಿ ಮತ್ತು ಬನಿಹಾಲ್ ನಡುವೆ ವಿವಿಧ ಸ್ಥಳಗಳಲ್ಲಿ ಕಲ್ಲುಗಳು ಉರುಳಿವೆ. ಭೂಕುಸಿತದ ಕಾರಣದಿಂದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತಡೆ ಹಾಕಲಾಗಿದೆ.

ಗುರುವಾರ ಸಂಜೆ 7ಗಂಟೆ ಸುಮಾರಿಗೆ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿದ್ದು, ನೂರಾರು ವಾಹನಗಳು ಸಿಲುಕಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.