ADVERTISEMENT

ಸುದೀರ್ಘ ಬಿಡುವಿನ ನಂತರ ಮುಂಬೈನಲ್ಲಿ ಮತ್ತೆ ಮಳೆ, ಭೂ ಕುಸಿತ

ಪಿಟಿಐ
Published 31 ಆಗಸ್ಟ್ 2021, 8:17 IST
Last Updated 31 ಆಗಸ್ಟ್ 2021, 8:17 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಬಹಳ ದಿನಗಳ ಬಿಡುವಿನ ನಂತರ ಮುಂಬೈನಲ್ಲಿ ಈಶಾನ್ಯ ಮಾರುತಗಳು ಸಕ್ರಿಯವಾಗಿದ್ದು, ಮಹಾ ನಗರ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮುಂಬೈನ ಅಸಲ್ಫಾ ಪ್ರದೇಶದಲ್ಲಿ ಭೂಕುಸಿತ ಉಂಟಾಗಿ, ಕೆಲವು ಮಂದಿ ಗಾಯಗೊಂಡಿದ್ದಾರೆ. ಮಳೆಯಿಂದಾಗಿ ಅಂಧೇರಿ, ಪರೆಲ್, ಭಾಂದೂಪ್ ಮತ್ತು ಇತರ ಕೆಲವು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದೆ. ಆ ಪ್ರದೇಶಗಳ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದರು.

ಮುಂಬೈ ಮಹಾನಗರ, ನೆರೆಯ ನವಿ ಮುಂಬೈ, ಠಾಣೆ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ಸೋಮವಾರ ಇಡೀ ರಾತ್ರಿ 20 ಮಿಮೀ ನಿಂದ 70 ಮಿಮೀ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ADVERTISEMENT

ದಕ್ಷಿಣ ಮುಂಬೈ ಭಾಗದಲ್ಲಿರುವ ಕೊಲಾಬಾ ವೀಕ್ಷಣಾಲಯದಲ್ಲಿನ ಮಾಹಿತಿ ಪ್ರಕಾರ, ಮಂಗಳವಾರ ಬೆಳಿಗ್ಗೆ 8.30ರವರೆಗಿನ ಮಳೆ ದಾಖಲೆಯ ಪ್ರಕಾರ, 29.8 ಮಿಮೀ ಮಳೆಯಾಗಿದೆ. ಸಾಂತಾಕ್ರೂಜ್‌ ಪ್ರದೇಶದಲ್ಲಿರುವ ಹವಾಮಾನ ಇಲಾಖೆಯ ವೀಕ್ಷಣಾಲಯದಲ್ಲಿ 49 ಮಿಮೀ ಮಳೆಯಾಗಿರುವುದಾಗಿ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.