ಬಾಂದ್ರಾ(ಮಹಾರಾಷ್ಟ್ರ): ಮುಂಬೈ: ರಾಜಕೀಯ ಕಾರಣದಿಂದಾಗಿ ಪರಸ್ಪರ ಅಂತರ ಕಾಯ್ದುಕೊಂಡಿರುವ ಸೋದರ ಸಂಬಂಧಿಗಳೂ ಆದ, ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಹಾಗೂ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರು 15 ದಿನಗಳಲ್ಲಿ ಎರಡನೇ ಬಾರಿ ಜತೆಯಾಗಿ ಕಾಣಿಸಿಕೊಂಡಿದ್ದಾರೆ. ಈ ಬೆಳವಣಿಗೆ, ಮಹಾರಾಷ್ಟ್ರ ರಾಜಕೀಯದಲ್ಲಿ ಅಚ್ಚರಿಗೆ ಕಾರಣವಾಗಿದೆ.
ಭಾನುವಾರ 65ನೇ ಹುಟ್ಟುಹಬ್ಬ ಆಚರಿಸಿದ ಉದ್ಧವ್‌ಗೆ ಶುಭ ಕೋರಲು ರಾಜ್ ಅವರು ಬಾಂದ್ರಾದಲ್ಲಿರುವ ‘ಮಾತೋಶ್ರೀ’ ನಿವಾಸಕ್ಕೆ ಬಂದಿದ್ದಾರೆ. ಎರಡು ದಶಕಗಳ ಬಳಿಕ ‘ಮಾತೋಶ್ರೀ’ಗೆ ಭೇಟಿ ನೀಡಿದ ರಾಜ್, ದೊಡ್ಡ ಹೂಗುಚ್ಛ ನೀಡಿ ಶುಭ ಹಾರೈಸಿದರು.
ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುಂಚಿತವಾಗಿ ಶಿವಸೇನಾ (ಯುಬಿಟಿ) ಮತ್ತು ಎಂಎನ್‌ಎಸ್ ಮೈತ್ರಿ ಮಾಡಿಕೊಳ್ಳಲಿದೆ ಎಂಬ ಊಹಾಪೋಹಕ್ಕೆ ಈ ಭೇಟಿ ಇನ್ನಷ್ಟು ಬಲ ಬಂದಿದೆ.
ಉದ್ಧವ್ ಅವರು ತಮಗೆ ಶುಭಾಶಯ ಹೇಳಲು ಬಂದ ರಾಜ್ ಅವರ ಭುಜದ ಮೇಲೆ ಕೈಹಾಕಿ ಕುಶಲೋಪರಿ ನಡೆಸಿದರು. ಶಿವಸೇನಾ ಸಂಸ್ಥಾಪಕ ದಿವಂಗತ ಬಾಳಾಸಾಹೇಬ್ ಠಾಕ್ರೆ ಅವರ ಭಾವಚಿತ್ರದ ಬಳಿ ನಿಂತು ಇಬ್ಬರೂ ಫೋಟೊ ತೆಗೆಸಿಕೊಂಡರು. ರಾಜಕೀಯ ಭಿನ್ನಾಭಿಪ್ರಾಯ ಮರೆತು ಇಬ್ಬರೂ ಜತೆಯಾಗಿದ್ದಾರೆ ಎಂಬುದನ್ನು ಈ ಫೋಟೊ ತೋರಿಸಿದೆ.
‘ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಗೆ ಶುಭ ಹಾರೈಸಿದರು’ ಎಂದು ಶಿವಸೇನಾ (ಯುಬಿಟಿ) ತನ್ನ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿದೆ.
‘ಹಿರಿಯ ಸಹೋದರ ಉದ್ಧವ್ ಅವರಿಗೆ ಜನ್ಮದಿನದ ಶುಭಾಶಯ ತಿಳಿಸಲು ನಾನು ದಿವಂಗತ ಬಾಳಾಸಾಹೇಬ್ ಠಾಕ್ರೆ ಅವರ ನಿವಾಸ ‘ಮಾತೋಶ್ರಿ’ಗೆ ಭೇಟಿ ನೀಡಿದೆ’ ಎಂದು ರಾಜ್ ‘ಎಕ್ಸ್’ನಲ್ಲಿ ಹೇಳಿದ್ದಾರೆ.
20 ವರ್ಷಗಳ ಬಿಡುವಿನ ಬಳಿಕ ಜುಲೈ 5ರಂದು ಉದ್ಧವ್ ಮತ್ತು ರಾಜ್ ಮೊದಲ ಬಾರಿ ಜತೆಯಾಗಿದ್ದರು. ಹಿಂದಿ ಹೇರಿಕೆ ಹಾಗೂ ತ್ರಿಭಾಷಾ ಸೂತ್ರದ ವಿರುದ್ಧ ವರ್ಲಿಯ ಸರ್ಧಾರ್ ವಲ್ಲಭಭಾಯಿ ಕ್ರೀಡಾಂಗಣದಲ್ಲಿ ನಡೆದಿದ್ದ ಜಂಟಿ ಪ್ರತಿಭಟನೆಯಲ್ಲಿ ಇಬ್ಬರೂ ವೇದಿಕೆ ಹಂಚಿಕೊಂಡಿದ್ದರು.
ರಾಜ್-ಉದ್ಧವ್ ಭೇಟಿಯು ವಿರೋಧ ಪಕ್ಷಗಳ ಮೈತ್ರಿಕೂಟ ಕೂಟ ಮಹಾ ವಿಕಾಸ್ ಆಘಾಡಿ (ಎಂವಿಎ) ಪಾಳಯದಲ್ಲಿ ಹರ್ಷ ಉಂಟುಮಾಡಿದೆ.
‘ಇಬ್ಬರು ಸೋದರ ಸಂಬಂಧಿಗಳು ಜತೆಯಾಗಬೇಕು ಎಂದು ಮಹಾರಾಷ್ಟ್ರದ ಜನರು ಬಯಸಿದ್ದರು. ಇದೀಗ ಇಬ್ಬರೂ ಒಟ್ಟಾಗಿದ್ದಾರೆ. ಎರಡು ಪಕ್ಷಗಳು ಜತೆಯಾಗಿವೆ. ಎರಡು ಸಿದ್ಧಾಂತಗಳು ಒಂದಾಗಿವೆ’ ಎಂದು ಶಿವಸೇನಾ (ಯುಬಿಟಿ) ಶಾಸಕ ಭಾಸ್ಕರ್ ಜಾಧವ್ ಹೇಳಿದ್ದಾರೆ.
‘ಜನರ ಮನಸ್ಸಿನಲ್ಲಿ ಏನಿದೆ ಎಂಬುದು ತಿಳಿದಿದೆ’
ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ‘ಜನರ ಮನಸ್ಸಿನಲ್ಲಿ ಏನಿದೆಯೋ ಅದು ವಿಧಾನಸಭಾ ಚುನಾವಣೆಯಲ್ಲಿ ಪ್ರತಿಫಲಿಸಿದೆ’ ಎಂದಿದ್ದಾರೆ.
‘ಜನರ ಮನಸ್ಸಿನಲ್ಲಿ ಏನಿದೆಯೋ ಅದು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಪ್ರತಿಫಲಿಸುತ್ತದೆ. ಇಬ್ಬರು ವ್ಯಕ್ತಿಗಳ ಮನಸ್ಸಿನಲ್ಲಿ ಏನಿದೆ ಎಂಬುದು ಮುಖ್ಯವಲ್ಲ’ ಎಂದು ಹೇಳಿದ್ದಾರೆ.
ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ‘ಇದು ಕುಟುಂಬಕ್ಕೆ ಸಂಬಂಧಿಸಿದ ವಿಚಾರ’ ಎಂದು ಪ್ರತಿಕ್ರಿಯಿಸಿದ್ದಾರೆ.
ಉದ್ಧವ್ ಠಾಕ್ರೆ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಉತ್ತಮ ಆರೋಗ್ಯ ದೀರ್ಘಾಯುಷ್ಯದ ಜೊತೆಗೆ ಮಹಾರಾಷ್ಟ್ರ ಜನರ ಹಿತಾಸಕ್ತಿ ಹಾಗೂ ಹಕ್ಕಿಗಾಗಿ ಸಂಘಟಿತರಾಗಿ ಹೋರಾಡೋಣ– ರಾಹುಲ್ ಗಾಂಧಿ, ಕಾಂಗ್ರೆಸ್ ಮುಖಂಡ
ಇಬ್ಬರು ಸೋದರ ಸಂಬಂಧಿಗಳು ಜತೆಯಾಗಿ ಕಾಣಿಸಿಕೊಂಡಿರುವುದು ತುಂಬಾ ಸಂತೋಷ ಉಂಟು ಮಾಡಿದೆ.– ಸುಪ್ರಿಯಾ ಸುಳೆ, ಎನ್‌ಸಿಪಿ (ಎಸ್‌ಪಿ) ಕಾರ್ಯಾಧ್ಯಕ್ಷೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.