ADVERTISEMENT

ಜನಸಂಖ್ಯೆ ನಿಯಂತ್ರಣಕ್ಕೆ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡಿ: ರಾಜ್ ಠಾಕ್ರೆ ಆಗ್ರಹ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಮೇ 2022, 9:40 IST
Last Updated 22 ಮೇ 2022, 9:40 IST
ರಾಜ್ ಠಾಕ್ರೆ
ರಾಜ್ ಠಾಕ್ರೆ    

ಪುಣೆ (ಮಹಾರಾಷ್ಟ್ರ): ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮತ್ತು ಜನಸಂಖ್ಯೆ ನಿಯಂತ್ರಣಕ್ಕೆ ಕಾನೂನನ್ನು ತರುವಂತೆ ಮಹಾರಾಷ್ಟ್ರ ನವ ನಿರ್ಮಾಣ ಸೇನಾ(ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದ್ದಾರೆ.

ಪುಣೆಯಲ್ಲಿ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಠಾಕ್ರೆ, ‘ದೇಶದಲ್ಲಿ ಶೀಘ್ರ ಏಕರೂಪ ನಾಗರಿಕ ಸಂಹಿತೆ ಹಾಗೂ ಜನಸಂಖ್ಯೆ ನಿಯಂತ್ರಣಕ್ಕೆ ಸಂಬಂಧಿಸಿ ಹೊಸ ಕಾನೂನನ್ನು ಜಾರಿಗೆ ತರಬೇಕು. ಔರಂಗಾಬಾದ್ ನಗರದ ಹೆಸರನ್ನು ಸಂಭಾಜಿನಗರ ಎಂದು ಬದಲಾಯಿಸಬೇಕು’ ಎಂದು ಹೇಳಿದ್ದಾರೆ.

‘ಮಸೀದಿಗಳ ಧ್ವನಿವರ್ಧಕಗಳಿಗೆ ಪ್ರತಿಯಾಗಿ ಧ್ವನಿವರ್ಧಕದಲ್ಲಿ ಹನುಮಾನ್ ಚಾಲೀಸಾ ನುಡಿಸಲು ನಾನು ನಮ್ಮ ಕಾರ್ಯಕರ್ತರಲ್ಲಿ ಕೇಳಿಕೊಂಡಿದ್ದೆ. ನಂತರ ಸಂಸದೆ ನವನೀತ್ ರಾಣಾ ಮತ್ತು ಶಾಸಕ ರವಿ ರಾಣಾ ದಂಪತಿ 'ಮಾತೋಶ್ರೀ' (ಸಿಎಂ ಉದ್ಧವ್​ ಠಾಕ್ರೆ ನಿವಾಸ)ದ ಮುಂದೆ ಹನುಮಾನ್ ಚಾಲೀಸಾವನ್ನು ಪಠಿಸುವುದಾಗಿ ಹೇಳಿದ್ದರು.

ADVERTISEMENT

ಆದರೆ, ಅವರನ್ನು ಬಂಧಿಸಿದ್ದರು. ಅಲ್ಲದೇ, ಶಿವಸೇನೆ ಕಾರ್ಯುಕರ್ತರು ಮತ್ತು ರಾಣಾ ದಂಪತಿ ನಡುವೆ ಏನಾಯಿತು ಎಂಬುದು ಎಲ್ಲರಿಗೂ ತಿಳಿದಿದೆ. ಹಾಗಾದರೆ, ‘ಮಾತೋಶ್ರೀ’ ಏನು ಮಸೀದಿಯೇ ಎಂದು ಪ್ರಶ್ನಿಸಿದ್ದಾರೆ.

ಅಯೋಧ್ಯೆಗೆ ಜೂ.5ರಂದು ನೀಡಬೇಕಿದ್ದ ಭೇಟಿಯನ್ನು ಮುಂದೂಡಿರುವುದಾಗಿ ಇತ್ತೀಚೆಗೆ ರಾಜ್ ಠಾಕ್ರೆ ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದರು.

‘ಇತ್ತೀಚೆಗೆ ಔರಂಗಾಬಾದ್‌ನಲ್ಲಿ ಮಾತನಾಡಿದ್ದ ರಾಜ್ ಠಾಕ್ರೆ, ‘ಮೇ 4ರೊಳಗೆ ಮಸೀದಿಗಳ ಮೇಲಿರುವ ಧ್ವನಿವರ್ಧಕಗಳನ್ನು ತೆಗೆಯಬೇಕು. ಇಲ್ಲದಿದ್ದರೆ ಮಸೀದಿಗಳ ಎದುರು ಹನುಮಾನ್‌ ಚಾಲೀಸಾ ಪಠಣ ಆರಂಭಿಸುತ್ತೇವೆ’ ಎಂದು ಹೇಳಿಕೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ರಾಜ್ ಠಾಕ್ರೆ ಹಾಗೂ ರ್‍ಯಾಲಿಯ ಸಂಘಟಕರ ವಿರುದ್ಧ ಔರಂಗಾಬಾದ್‌ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.