ADVERTISEMENT

ಲಸಿಕೆ ಕುರಿತು ಹರ್ಷವರ್ಧನ್‌ ತಪ್ಪು ಮಾಹಿತಿ ನೀಡುವುದನ್ನು ನಿಲ್ಲಿಸಲಿ: ಗೆಹ್ಲೋಟ್‌

ಪಿಟಿಐ
Published 26 ಮೇ 2021, 10:57 IST
Last Updated 26 ಮೇ 2021, 10:57 IST
ಅಶೋಕ್‌ ಗೆಹ್ಲೋಟ್‌
ಅಶೋಕ್‌ ಗೆಹ್ಲೋಟ್‌   

ಜೈಪುರ: ದೇಶದಲ್ಲಿ ಕೋವಿಡ್‌ ಲಸಿಕೆಗಳ ಲಭ್ಯತೆ ಕುರಿತು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಅವರು ತಪ್ಪು ಮಾಹಿತಿಗಳನ್ನು ನೀಡುತ್ತಿದ್ದಾರೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಬುಧವಾರ ಆರೋಪ ಮಾಡಿದ್ದಾರೆ. ಸರಣಿ ಟ್ವೀಟ್‌ಗಳ ಮೂಲಕ ಅವರು ಹರ್ಷವರ್ಧನ್‌ ಅವರನ್ನು ಟೀಕಿಸಿದ್ದಾರೆ.

ಸರ್ಕಾರದ ಬಳಿ 1 ಕೋಟಿ ಡೋಸ್‌ ಲಸಿಕೆಗಳ ದಾಸ್ತಾನು ಇದೆ ಎಂದು ಮೇ 19ರಂದು ಹರ್ಷವರ್ಧನ್‌ ಹೇಳಿಕೆ ನೀಡಿದ್ದರು. ಆದರೆ, ಲಸಿಕೆ ಕೊರತೆಯಿಂದ ದೇಶದಾದ್ಯಂತ ಲಸಿಕಾ ಕೇಂದ್ರಗಳು ಮುಚ್ಚುತ್ತಿವೆ ಎಂದಿದ್ದಾರೆ.

ಹರ್ಷವರ್ಧನ್‌ ತಪ್ಪು ಮಾಹಿತಿ ನೀಡುವುದನ್ನು ನಿಲ್ಲಿಸಬೇಕು. ಜನರು ಆಮ್ಲಜನಕ ಸಿಗದೇ ಪರದಾಡುತ್ತಿದ್ದಾರೆ. ಆದರೆ ಅವರು ಆಮ್ಲಜನಕದ ಕೊರತೆ ಇಲ್ಲ ಎಂದು ಹೇಳುತ್ತಿದ್ದಾರೆ. ದೇಶದಲ್ಲಿ ಒಂದು ಕೋಟಿ ಲಸಿಕೆ ಲಭ್ಯವಿದೆ ಎಂದು ಅವರು ಹೇಳುತ್ತಿದ್ದಾರೆ. ಆದರೆ 1 ಕೋಟಿ ಲಸಿಕೆಯನ್ನು ಎಲ್ಲಾ ರಾಜ್ಯಗಳಿಗೂ ಹಂಚಿದರೆ ಕೇವಲ ಒಂದೇ ದಿನದಲ್ಲಿ ಲಸಿಕೆ ಖಾಲಿ ಆಗುತ್ತದೆ.

ADVERTISEMENT

ಏಪ್ರಿಲ್‌ 2ರಂದು ದೇಶದಾದ್ಯಂತ 42 ಲಕ್ಷ ಡೋಸ್‌ ಲಸಿಕೆಗಳನ್ನು ನೀಡಲಾಗಿತ್ತು. ಆದರೆ ಈಗ ದಿನಕ್ಕೆ ಕೇವಲ 16 ಲಕ್ಷ ಲಸಿಕೆಗಳನ್ನು ಮಾತ್ರ ನೀಡಲಾಗುತ್ತಿದೆ. ದೇಶದಲ್ಲಿ ಇಂತಹ ಪರಿಸ್ಥಿತಿ ಇರುವಾಗ ಆರೋಗ್ಯ ಸಚಿವರ ಹೇಳಿಕೆಗಳು ಜನರಲ್ಲಿ ಅಸಮಾಧಾನಕ್ಕೆ ಕಾರಣವಾಗುತ್ತವೆ ಎಂದು ಅವರು ಹೇಳಿದ್ದಾರೆ.

ಇದರ ಜೊತೆ, ಗಂಗಾ ಮತ್ತು ಯಮುನಾ ನದಿ ತೀರಗಳಲ್ಲಿ ಮೃತ ದೇಹಗಳನ್ನು ಸುಡುವ ಮತ್ತು ಭಸ್ಮವನ್ನು ನದಿಗೆ ಬಿಡುವ ಕುರಿತು ನಿರ್ದಿಷ್ಟವಾದ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಹೊರಡಿಸಬೇಕು. ಅವೈಜ್ಞಾನಿಕ ಪದ್ಧತಿಯಲ್ಲಿ ಈ ಕ್ರಿಯೆಗಳು ನಡೆದರೆ ಕೊರೊನಾ ಸೋಂಕು ಹರಡುವಿಕೆ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಗೆಹ್ಲೋಟ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.