ಬೆಂಕಿಯಿಂದಾಗಿ ಆಸ್ಪತ್ರೆ ಉಪಕರಣಗಳು ಸುಟ್ಟುಹೋಗಿವೆ
ಜೈಪುರ: ನಗರದ ಸರ್ಕಾರಿ ಸ್ವಾಮ್ಯದ ಸವಾಯಿ ಮಾನ್ ಸಿಂಗ್ (ಎಸ್‌ಎಂಎಸ್) ಆಸ್ಪತ್ರೆಯಲ್ಲಿ ಭಾನುವಾರ ತಡರಾತ್ರಿ ಬೆಂಕಿ ಅವಘಡ ಸಂಭವಿಸಿದ್ದು, 6 ರೋಗಿಗಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಟೋರೇಜ್ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡ ಸಂದರ್ಭದಲ್ಲಿ 11 ರೋಗಿಗಳು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡಿರುವ ಸಾಧ್ಯತೆ ಇದೆ ಎಂದು ಟ್ರಾಮಾ ಸೆಂಟರ್ ಉಸ್ತುವಾರಿ ಡಾ. ಅನುರಾಗ್ ಧಾಕಡ್ ಹೇಳಿದ್ದಾರೆ.
ಮೃತರನ್ನು ಪಿಂಟು, ದಿಲೀಪ್, ಶ್ರೀನಾಥ್, ರುಕ್ಮಿಣಿ, ಖುರ್ಮಾ ಮತ್ತು ಬಹದ್ದೂರ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇಬ್ಬರು ಮಹಿಳೆಯರು ಮತ್ತು ನಾಲ್ವರು ಪುರುಷರು ಸಾವಿಗೀಡಾಗಿದ್ದಾರೆ. ಇತರೆ 14 ರೋಗಿಗಳನ್ನು ಬೇರೆ ಐಸಿಯು ಮತ್ತು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು ಎಂದು ಅನುರಾಗ್ ಮಾಹಿತಿ ನೀಡಿದ್ದಾರೆ.
ಬೆಂಕಿ ಅವಘಡದಿಂದಾಗಿ ವಿವಿಧ ದಾಖಲೆಗಳು, ಐಸಿಯು ಉಪಕರಣಗಳು, ರಕ್ತದ ಮಾದರಿ ಟ್ಯೂಬ್‌ಗಳು ಸೇರಿದಂತೆ ಇತರೆ ವಸ್ತುಗಳು ಸುಟ್ಟುಹೋಗಿವೆ ಎಂದು ಮೂಲಗಳು ತಿಳಿಸಿವೆ.
ಬೆಂಕಿ ಮತ್ತು ದಟ್ಟವಾದ ಹೊಗೆ ವೇಗವಾಗಿ ಹರಡಿದ ಪರಿಣಾಮ ವಾರ್ಡ್‌ನಲ್ಲಿದ್ದ ರೋಗಿಗಳು ಮತ್ತು ಅವರ ಕುಟುಂಬಸ್ಥರು ಕೆಲಕಾಲ ಆತಂಕಕ್ಕೆ ಒಳಗಾಗಿದ್ದರು. ಅಗ್ನಿಶಾಮಕ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ.
ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ, ಸಚಿವರಾದ ಜವಾಹರ್ ಸಿಂಗ್ ಬೆಧಮ್, ಜೋಗರಾಮ್ ಪಟೇಲ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.