ಎಫ್‌ಐಆರ್
(ಸಾಂದರ್ಭಿಕ ಚಿತ್ರ)
ಜೋಧಪುರ: ಬೇರೆ ಜಾತಿಯ ಹುಡುಗಿಯನ್ನು ಮದುವೆ ಆಗಿರುವುದಾಗಿ ಆರೋಪಿಸಿ ಅಂಗವಿಕಲ ರಾಜಾರಾಮ್ ಪಾಲೀವಾಲ್ ಮತ್ತು ಅವರ ಕುಟುಂಬಕ್ಕೆ ಬಹಿಷ್ಕಾರ ಹಾಕಿ, ₹1 ಲಕ್ಷ ದಂಡ ವಿಧಿಸಿದ ಕಾಪ್ ಪಂಚಾಯತ್‌ನ 100 ಸದಸ್ಯರ ವಿರುದ್ಧ ಇಲ್ಲಿನ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಾಜಸ್ಥಾನದ ಲೂಣಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರಾಜಾರಾಮ್ ಪಾಲೀವಾಲ್ (45) ಅವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಹೆಚ್ಚುವರಿ ₹21 ಲಕ್ಷ ದಂಡ ಪಾವತಿಸುವಂತೆಯೂ ಇವರ ಮೇಲೆ ಕಾಪ್ ಪಂಚಾಯತ್ ಒತ್ತಡ ಹೇರಿತ್ತು.
‘ನಾನು 2022ರ ಡಿಸೆಂಬರ್ 3ರಂದು ಕುಟುಂಬದ ಒಪ್ಪಿಗೆಯ ಮೇಲೆಯೇ ನನ್ನ ಜಾತಿಯ ಮಧ್ಯಪ್ರದೇಶದ ಹುಡುಗಿಯನ್ನು ಮದುವೆ ಆಗಿದ್ದೇನೆ. ಹಾಗಿದ್ದರೂ ನಮ್ಮ ಮದುವೆಯನ್ನು ನಮ್ಮ ಸಮುದಾಯದವರು ಒಪ್ಪಿಕೊಳ್ಳಲಿಲ್ಲ. 2024ರ ಜೂನ್ 26ರಂದು ಈ ಬಗ್ಗೆ ಕಾಪ್ ಪಂಚಾಯತ್ ಸೇರಿಸಲು ಮುಂದಾದರು’ ಎಂದು ರಾಜಾರಾಮ್ ಹೇಳಿದರು.
ಬೇರೆ ಜಾತಿಯ ಹುಡುಗಿಯನ್ನು ಮದುವೆಯಾಗಿದ್ದಾರೆ ಎನ್ನುವ ಕಾರಣ ನೀಡಿ, ರಾಜಾರಾಮ್ ಕುಟುಂಬವನ್ನು ಬಹಿಷ್ಕರಿಸುವಂತೆ ಸಭೆಯಲ್ಲಿ ನಿರ್ಧರಿಸಲಾಯಿತು. ‘ಹುಡುಗಿಯು ನಮ್ಮ ಜಾತಿಯವರೇ’ ಎಂದು ಸಭೆಗೆ ರಾಜಾರಾಮ್ ಅವರು ಸಾಕ್ಷ್ಯ ನೀಡಿದರು. ಆದರೂ ಸಭೆಯು ಬಹಿಷ್ಕಾರ ಹಾಕಿತು.
‘ಬಹಿಷ್ಕಾರ ಹಾಕಿ, ದಂಡ ವಿಧಿಸಿ, ಬೆದರಿಕೆ ಒಡ್ಡಿದ್ದ ಆರೋಪದಡಿ 100 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ’ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.