ಜೈಪುರ: ಬುರ್ಖಾ ಧರಿಸಿದ ವೈದ್ಯಕೀಯ ಇಂಟರ್ನ್ ಒಬ್ಬರು ಕೆಲಸದ ಸ್ಥಳದಲ್ಲಿ ತನ್ನ ಮುಖ ಕಾಣುವಂತೆ ದುಪಟ್ಟಾ ತೆಗೆಯಲು ನಿರಾಕರಿಸಿ, ಸುಳ್ಳು ಪ್ರತಿಪಾದನೆಯೊಂದಿಗೆ ಕೋಮು ಉದ್ವಿಗ್ನತೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಭಾನುವಾರ ವಿಡಿಯೊವೊಂದು ವೈರಲ್ ಆಗಿದ್ದು, ಅದರಲ್ಲಿ ಸ್ತ್ರೀರೋಗ ತಜ್ಞೆ ಮತ್ತು ಸರ್ಕಾರಿ ಆಸ್ಪತ್ರೆಯ ಇಂಟರ್ನ್ ಒಬ್ಬರು ಅವರ ದುಪಟ್ಟಾ ವಿಚಾರವಾಗಿ ಕೆಲಸದ ವೇಳೆ ವಾಗ್ವಾದ ನಡೆಸುತ್ತಿರುವುದು ದಾಖಲಾಗಿದೆ.
ಸೋಮವಾರ ಸ್ಥಳೀಯ ಬಿಜೆಪಿ ನಾಯಕರು ಜಿಲ್ಲಾಧಿಕಾರಿ ಕಲ್ಪನಾ ಅಗರ್ವಾಲ್ ಅವರಿಗೆ ಮನವಿ ಸಲ್ಲಿಸಿ, ಕೋಮು ಉದ್ವಿಗ್ನತೆ ಸೃಷ್ಟಿಸುತ್ತಿರುವ ಅವರ ವಿರುದ್ಧ ಕಠಿಣ ಕ್ರಮಗೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ವೈದ್ಯಕೀಯ ಕಾರಣಕ್ಕಾಗಿ ಕೆಲಸದ ವೇಳೆ ಮುಖ ತೋರಿಸುವಂತೆ ಇಂಟರ್ನ್‌ಗೆ ಹೇಳಲಾಗಿತ್ತು ಎಂದು ಸ್ತ್ರೀರೋಗ ತಜ್ಞೆ ಡಾ. ಬಿಂದು ಗುಪ್ತಾ ಹೇಳಿದ್ದಾರೆ.
‘ಆಸ್ಪತ್ರೆಯಲ್ಲಿ ಎಲ್ಲರಿಗೂ ಅನ್ವಯವಾಗುವ ವಸ್ತ್ರ ಸಂಹಿತೆ ಇದೆ. ಆದರೆ ಇಂಟರ್ನ್ ಅದನ್ನು ನಿರಾಕರಿಸಿದ್ದಾರೆ. ಅಲ್ಲದೆ, ಘಟನೆಯ ವಿಡಿಯೊ ರೆಕಾರ್ಡ್ ಹರಿಬಿಟ್ಟು, ಅನವಶ್ಯಕ ವಿವಾದ ಸೃಷ್ಟಿಸುತ್ತಿದ್ದಾರೆ’ ಎಂದು ಬಿಂದು ಅವರು ಹೇಳಿದ್ದಾರೆ.
‘ಇಂಟರ್ನ್‌ಗೆ ಬುರ್ಖಾ ಕಳಚುವಂತೆ ಕೇಳಿರಲಿಲ್ಲ. ವಸ್ತ್ರ ಸಂಹಿತೆಯ ಪ್ರಕಾರ, ದುಪಟ್ಟಾವನ್ನು ಮಾತ್ರ ತೆಗೆಯುವಂತೆ ಕೇಳಲಾಗಿತ್ತು’ ಎಂದು ಟೋಂಕ್‌ನ ಮುಖ್ಯ ಆರೋಗ್ಯ ಅಧಿಕಾರಿ ಡಾ. ಹನುಮಾನ್ ಪ್ರಸಾದ್ ಹೇಳಿದ್ದಾರೆ.
ಆದಾಗ್ಯೂ, ಘಟನೆ ಬಗ್ಗೆ ಸ್ತ್ರೀ ರೋಗ ತಜ್ಞೆಯಾಗಲಿ, ಇಂಟರ್ನ್ ಆಗಲಿ ಈವರೆಗೆ ಔಪಚಾರಿಕ ದೂರು ನೀಡಿಲ್ಲ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.