ADVERTISEMENT

ರಾಜಸ್ಥಾನ ರಾಜಕೀಯ ಬಿಕ್ಕಟ್ಟು | ಸಚಿನ್ ಪೈಲಟ್‌ ಬಣ ಸದ್ಯಕ್ಕೆ ನಿರಾಳ

ಮಂಗಳವಾರದವರೆಗೆ ಕ್ರಮ ಕೈಗೊಳ್ಳದಂತೆ ಹೈಕೋರ್ಟ್‌ ಸೂಚನೆ

ಪಿಟಿಐ
Published 17 ಜುಲೈ 2020, 20:55 IST
Last Updated 17 ಜುಲೈ 2020, 20:55 IST
   

ಜೈಪುರ: ಶಾಸಕ ಸ್ಥಾನದಿಂದ ಅನರ್ಹತೆಯ ತೂಗುಗತ್ತಿ ಎದುರಿಸುತ್ತಿರುವ ರಾಜಸ್ಥಾನ ಕಾಂಗ್ರೆಸ್‌ನ ಸಚಿನ್‌ ಪೈಲಟ್‌ ನೇತೃತ್ವದ ಬಣ ಸದ್ಯಕ್ಕೆ ನಿರಾಳವಾಗಿದೆ.

ರಾಜಸ್ಥಾನ ವಿಧಾನಸಭೆ ಸ್ಪೀಕರ್‌ ನೀಡಿರುವ ಅನರ್ಹತೆ ನೋಟಿಸ್‌ ವಿಚಾರದಲ್ಲಿ 19 ಶಾಸಕರ ವಿರುದ್ಧ ಮಂಗಳವಾರ
ದವರೆಗೆ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಹೈಕೋರ್ಟ್‌ ಸೂಚಿಸಿದೆ. ಸ್ಪೀಕರ್‌ ನೀಡಿದ್ದ ನೋಟಿಸ್‌ ಪ್ರಶ್ನಿಸಿ ಪೈಲಟ್‌ ಮತ್ತು ಇತರರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸೋಮವಾರ ಬೆಳಗ್ಗೆ 10 ಗಂಟೆಗೆ ಮುಂದೂಡಲಾಗಿದೆ.

ಮಂಗಳವಾರ ಸಂಜೆ 5.30ರವರೆಗೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಸ್ಪೀಕರ್‌ ಸಿ.ಪಿ. ಜೋಶಿ ಪರ ವಕೀಲರು ನ್ಯಾಯಾಲಯಕ್ಕೆ ಭರವಸೆ ಕೊಟ್ಟರು.

ADVERTISEMENT

ಸುಪ‍್ರೀಂ ಕೋರ್ಟ್‌ನ ಹಿರಿಯ ವಕೀಲರಾದ ಹರೀಶ್‌ ಸಾಳ್ವೆ ಮತ್ತು ಮುಕುಲ್‌ ರೋಹಟಗಿ ಅವರು ಪೈಲಟ್‌ ಪರವಾಗಿ ವಾದಿಸಿದರು. ಸಾಳ್ವೆ ಅವರು ಹಲವು ಅಂತರರಾಷ್ಟ್ರೀಯ ವ್ಯಾಜ್ಯಗಳಲ್ಲಿ ಕೇಂದ್ರ ಸರ್ಕಾರದ ಪರವಾಗಿ ವಾದಿಸಿದ್ದಾರೆ. ರೋಹಟಗಿ ಅವರು ಈ ಹಿಂದೆ ಅಟಾರ್ನಿ ಜನರಲ್‌ ಆಗಿದ್ದರು. ಸ್ಪೀಕರ್‌ ಪರವಾಗಿ ಹಿರಿಯ ವಕೀಲ ಮತ್ತು ಕಾಂಗ್ರೆಸ್‌ ಮುಖಂಡ ಅಭಿಷೇಕ್‌ ಮನು ಸಿಂಘ್ವಿ ಅವರು ವಾದಿಸಿದ್ದಾರೆ.

ಇಬ್ಬರು ಶಾಸಕರ ಅಮಾನತು
ರಾಜಸ್ಥಾನ ರಾಜಕಾರಣದಲ್ಲಿ ಶುಕ್ರವಾರವೂ ಹಲವು ಬೆಳವಣಿಗೆಗಳು ನಡೆದಿವೆ. ರಾಜ್ಯ ಸರ್ಕಾರವನ್ನು ಉರುಳಿಸಲು ಯತ್ನಿಸಲಾಗಿದೆ ಎಂದು ಆರೋಪಿಸಿ ಎಫ್‌ಐಆರ್‌ ದಾಖಲಿಸಲಾಗಿದೆ.

ಪೈಲಟ್‌ಗೆ ನಿಷ್ಠರಾಗಿರುವ ಶಾಸಕರಾದ ಭನ್ವರ್‌ಲಾಲ್‌ ಶರ್ಮಾ ಮತ್ತು ವಿಶ್ವೇಂದ್ರ ಸಿಂಗ್‌ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಕಾಂಗ್ರೆಸ್‌ ಅಮಾನತು ಮಾಡಿದೆ.

ಕೇಂದ್ರ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್ ಅವರು ಶರ್ಮಾ ಮತ್ತು ವಿಶ್ವೇಂದ್ರ‌ ಜತೆ ನಡೆಸಿದ್ದಾರೆ ಎನ್ನಲಾದ ಸಂಭಾಷಣೆಯ ಆಡಿಯೊ ಗುರುವಾರವೇ ಬಹಿರಂಗವಾಗಿದೆ. ಸರ್ಕಾರ ಉರುಳಿಸುವ ಸಂಚಿನಲ್ಲಿ ಶೇಖಾವತ್‌ ಭಾಗಿಯಾಗಿದ್ದಾರೆ ಎಂದು ಈ ಆಡಿಯೊವನ್ನು ಇರಿಸಿಕೊಂಡು ಕಾಂಗ್ರೆಸ್ ಆರೋಪಿಸಿದೆ. ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದೆ.

ಆಡಿಯೊದಲ್ಲಿ ಇರುವುದು ತಮ್ಮ ಧ್ವನಿ ಅಲ್ಲ, ಯಾವುದೇ ತನಿಖೆಗೆ ಸಿದ್ಧ ಎಂದು ಶೇಖಾವತ್‌ ಹೇಳಿದ್ದಾರೆ.

ಆಡಿಯೊ ಪ್ರಕರಣದ ತನಿಖೆಯನ್ನು ರಾಜಸ್ಥಾನದ ವಿಶೇಷ ಕಾರ್ಯಾಚರಣೆ ಪಡೆ (ಎಸ್‌ಒಜಿ) ಪೊಲೀಸರು ಚುರುಕುಗೊಳಿಸಿದ್ದಾರೆ. ಆಡಿಯೊದಲ್ಲಿರುವ ಧ್ವನಿಗಳ ದೃಢೀಕರಣಕ್ಕಾಗಿ ಶರ್ಮಾ ಮತ್ತು ವಿಶ್ವೇಂದ್ರ‌ ಅವರ ಧ್ವನಿ ಮಾದರಿ ಪಡೆದುಕೊಳ್ಳಲುಪೈಲಟ್‌ ಬಣದ ಶಾಸಕರು ತಂಗಿರುವ ಹರಿಯಾಣದ ಮನೇಸರ್‌ನಲ್ಲಿರುವ ರಿಸಾರ್ಟ್‌ಗೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ರಿಸಾರ್ಟ್‌ ಹೊರಭಾಗವು ನಾಟಕೀಯ ದೃಶ್ಯಗಳಿಗೆ ಸಾಕ್ಷಿಯಾಯಿತು. ರಾಜಸ್ಥಾನ ಪೊಲೀಸರನ್ನು ಹರಿಯಾಣ ಪೊಲೀಸರು ತಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.