ADVERTISEMENT

ರಾಜ್ಯಸಭಾ ಉಪ ಚುನಾವಣೆ: ಬಿಜೆಪಿ ಅಭ್ಯರ್ಥಿ ರೇಖಾ ಶರ್ಮಾ ಅವಿರೋಧ ಆಯ್ಕೆ

ಪಿಟಿಐ
Published 10 ಡಿಸೆಂಬರ್ 2024, 10:27 IST
Last Updated 10 ಡಿಸೆಂಬರ್ 2024, 10:27 IST
<div class="paragraphs"><p>ರೇಖಾ&nbsp;ಶರ್ಮಾ&nbsp;</p></div>

ರೇಖಾ ಶರ್ಮಾ 

   

ಚಂಡೀಗಢ: ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಹಾಗೂ ಬಿಜೆಪಿ ಅಭ್ಯರ್ಥಿ ರೇಖಾ ಶರ್ಮಾ ಅವರು ಇಂದು (ಮಂಗಳವಾರ) ಹರಿಯಾಣದಿಂದ ರಾಜ್ಯಸಭಾ ಉಪಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ.

ರೇಖಾ ಶರ್ಮಾ ಅವರು ಕಣದಲ್ಲಿರುವ ಏಕೈಕ ಅಭ್ಯರ್ಥಿಯಾಗಿರುವುದರಿಂದ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.

ADVERTISEMENT

ರೇಖಾ ಶರ್ಮಾ ಅವರು ನಾಮಪತ್ರ ಸಲ್ಲಿಸುವ ವೇಳೆ ಹರಿಯಾಣ ಮುಖ್ಯಮಂತ್ರಿ ನಾಯಬ್ ಸಿಂಗ್‌ ಸೈನಿ, ರಾಜ್ಯ ಬಿಜೆಪಿ ಅಧ್ಯಕ್ಷ ಮೋಹನ್ ಲಾಲ್ ಬಡೋಲಿ, ಸಚಿವ ಕ್ರಿಶನ್ ಲಾಲ್ ಪನ್ವಾರ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.

ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶರ್ಮಾ, ‘ದೇಶ ಸೇವೆ ಮಾಡಲು ಮತ್ತೊಮ್ಮೆ ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡಾ, ಮನೋಹರ್ ಲಾಲ್ ಖಟ್ಟರ್ ಮತ್ತು ಹರಿಯಾಣ ಸಿಎಂ ನಾಯಬ್ ಸಿಂಗ್‌ ಸೈನಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ಹೇಳಿದ್ದಾರೆ.

ಮಹಿಳಾ ಸಬಲೀಕರಣಕ್ಕಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಎಂದು ಅವರು ಬಣ್ಣಿಸಿದ್ದಾರೆ.

ರೇಖಾ ಶರ್ಮಾ ಅವರು ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಹರಿಯಾಣ ಸಿಎಂ ನಾಯಬ್ ಸಿಂಗ್‌ ಸೈನಿ, ‘ಮುಂಚಿತವಾಗಿ ನಿಮ್ಮ ವಿಜಯಕ್ಕಾಗಿ ಅಭಿನಂದನೆಗಳು ಮತ್ತು ಶುಭಾಶಯಗಳು’ ಎಂದು ತಿಳಿಸಿದ್ದಾರೆ.

ಡಿಸೆಂಬರ್ 20ರಂದು ನಡೆಯಲಿರುವ ರಾಜ್ಯಸಭಾ ಉಪಚುನಾವಣೆಗೆ ರೇಖಾ ಶರ್ಮಾ ಅವರ ಹೆಸರನ್ನು ಬಿಜೆಪಿ ಸೋಮವಾರ ಪ್ರಕಟಿಸಿತ್ತು. ಪ್ರತಿಪಕ್ಷಗಳು ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ನಿರ್ಧರಿಸಿವೆ.

ಹರಿಯಾಣದ ಐದು ರಾಜ್ಯಸಭೆ ಸ್ಥಾನಗಳಲ್ಲಿ ಸುಭಾಷ್ ಬರಾಲಾ, ರಾಮ್ ಚಂದರ್ ಜಾಂಗ್ರಾ ಮತ್ತು ಕಿರಣ್ ಚೌಧರಿ ಬಿಜೆಪಿ ಸದಸ್ಯರಾಗಿದ್ದು, ರೇಖಾ ಶರ್ಮಾ ಕೂಡ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಕಾರ್ತಿಕೇಯ ಶರ್ಮಾ ಸ್ವತಂತ್ರ ಸದಸ್ಯರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.