ಕಾಂಗ್ರೆಸ್ ಸಂಸದ ರಾಕೇಶ್ ರಾಥೋಡ್
(ಫೇಸ್‌ಬುಕ್ ಚಿತ್ರ)
ನವದೆಹಲಿ: ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ಕಾಂಗ್ರೆಸ್ ಸಂಸದ ರಾಕೇಶ್ ರಾಥೋರ್ ಅವರನ್ನು, ಉತ್ತರಪ್ರದೇಶದ ಸೀತಾಪುರ ಪಟ್ಟಣದ ತಮ್ಮ ನಿವಾಸದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಬಂಧಿಸಿದರು.
ಮದುವೆ ಆಗುವುದಾಗಿ ನಂಬಿಸಿ, ರಾಜಕೀಯದಲ್ಲಿ ಮುಂದೆ ಬರಲು ಸಹಾಯ ಮಾಡುವುದಾಗಿ ನಂಬಿಸಿ ರಾಕೇಶ್ ಅವರು ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು 45 ವರ್ಷ ವಯಸ್ಸಿನ ಮಹಿಳೆಯೊಬ್ಬರು ನೀಡಿದ ದೂರು ಆಧರಿಸಿ ಪೊಲೀಸರು ಈಚೆಗೆ ಎಫ್‌ಐಆರ್ ದಾಖಲಿಸಿದ್ದಾರೆ. ರಾಕೇಶ್ ಅವರು ಸೀತಾಪುರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಆರೋಪದ ಬಗ್ಗೆ ಮಾತನಾಡಲು ರಾಕೇಶ್ ಅವರು ಪತ್ರಿಕಾಗೋಷ್ಠಿ ಕರೆದಿದ್ದರು. ಆಗ ಮನೆಯೊಳಕ್ಕೆ ಬಂದ ಪೊಲೀಸರು, ಸಂಸದರನ್ನು ಬಂಧಿಸಿದರು. ರಾಕೇಶ್ ಅವರು ನಿರೀಕ್ಷಣಾ ಜಾಮೀನು ಕೋರಿ ಅಲಹಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ವಜಾಗೊಳಿಸಿದ್ದ ಹೈಕೋರ್ಟ್ ನಾಲ್ಕು ವಾರಗಳಲ್ಲಿ ಶರಣಾಗುವಂತೆ ಸೂಚಿಸಿತ್ತು.
ತಮ್ಮ ಮೇಲಿನ ಆರೋಪಗಳು ರಾಜಕೀಯ ಪ್ರೇರಿತ, ಅವು ತಮ್ಮ ಹೆಸರು ಹಾಳುಮಾಡುವ ಉದ್ದೇಶ ಹೊಂದಿವೆ ಎಂದು ರಾಕೇಶ್ ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಲು ಬರಬೇಕು ಎಂದು ರಾಕೇಶ್ ಅವರಿಗೆ ನೋಟಿಸ್ ನೀಡಲಾಗಿತ್ತು. ಆದರೆ ಅವರು ಪೊಲೀಸರ ಮುಂದೆ ಹಾಜರಾಗಿರಲಿಲ್ಲ ಎಂದು ಮೂಲಗಳು ಹೇಳಿವೆ.
ಮದುವೆ ಆಗುವುದಾಗಿ, ರಾಜಕೀಯವಾಗಿ ಮುಂದೆ ಬರಲು ನೆರವಾಗುವುದಾಗಿ ನಂಬಿಸಿ ರಾಕೇಶ್ ಅವರು ತಮ್ಮ ಮೇಲೆ ಹಲವು ಬಾರಿ ಅತ್ಯಾಚಾರ ನಡೆಸಿದ್ದಾರೆ. ಪತ್ನಿಗೆ ವಿಚ್ಛೇದನ ನೀಡಿ ತನ್ನನ್ನು ಮದುವೆ ಆಗುವಂತೆ ಒತ್ತಾಯಿಸಿದಾಗ ರಾಕೇಶ್ ಹಿಂದೇಟು ಹಾಕಿದ್ದಾರೆ ಎಂದು ಮಹಿಳೆ ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.