ADVERTISEMENT

ರಾಮ ಮಂದಿರ ವಿಚಾರದಲ್ಲಿ ನ್ಯಾಯಾಂಗದ ಮೇಲೆ ನಂಬಿಕೆಯಿಡಿ: ಮೋದಿ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2019, 10:48 IST
Last Updated 6 ನವೆಂಬರ್ 2019, 10:48 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ರಾಮ ಮಂದಿರದ ವಿಚಾರದ ಬಗ್ಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ನ್ಯಾಯಾಂಗದ ಮೇಲೆ ನಂಬಿಕೆಯಿಡಿ ಎಂದು ಜನರಿಗೆ ಹೇಳಿದ್ದಾರೆ. ಅದೇ ವೇಳೆಈ ವಿಷಯದ ಬಗ್ಗೆ ಅಸಂಬದ್ದ ಆರೋಪಗಳನ್ನು ಮಾಡುತ್ತಿರುವವರು ಸುಮ್ಮನಿರಿ ಎಂದಿದ್ದಾರೆ.

ಮಹಾರಾಷ್ಟ್ರದ ನಾಸಿಕ್‌ನಲ್ಲಿ ಗುರುವಾರ ಮಹಾಜನಾದೇಶ ರ‍್ಯಾಲಿಯಲ್ಲಿ ಮಾತನಾಡಿದ ಮೋದಿ, ಕಳೆದ 2- 3 ತಿಂಗಳಲ್ಲಿ ಕೆಲವು ಚರ್ಚಾ ಶೂರರು ಮತ್ತು ಬಿಚ್ಚುಮಾತಿನ ವ್ಯಕ್ತಿಗಳು ರಾಮಮಂದಿರ ಬಗ್ಗೆ ಅಸಂಬದ್ಧ ಮಾತುಗಳನ್ನಾಡುತ್ತಿದ್ದಾರೆ. ಸುಪ್ರೀಂಕೋರ್ಟ್‌ ಬಗ್ಗೆ ಗೌರವ ಇಟ್ಟುಕೊಂಡಿರಬೇಕು. ರಾಮ ಮಂದಿರ ವಿಷಯ ನ್ಯಾಯಾಲಯದಲ್ಲಿದೆ. ಎಲ್ಲ ಪಂಗಡಗಳು ತಮ್ಮ ವಾದಗಳು ಮಂಡಿಸುತ್ತಿದ್ದು, ನ್ಯಾಯಾಲಯ ಅದನ್ನು ಆಲಿಸುತ್ತಿದೆ.

ರಾಮ ಮಂದಿರದ ವಿಷಯದಲ್ಲಿ ಸರ್ಕಾರಕ್ಕೆ ನ್ಯಾಯಾಂಗ ಮತ್ತು ಸಂವಿಧಾನದ ಮೇಲೆ ನಂಬಿಕೆ ಇದೆ. ಈ ಚರ್ಚಾಶೂರರು ಎಲ್ಲಿಂದ ಬರುತ್ತಾರೆ ಎಂಬುದು ನನಗೆ ಅಚ್ಚರಿಹುಟ್ಟಿಸುತ್ತದೆ. ಅವರು ಯಾಕೆ ಅಡೆತಡೆಗಳನ್ನು ಸೃಷ್ಟಿಸುತ್ತಾರೆ ಎಂಬುದು ತಿಳಿಯುತ್ತಿಲ್ಲ.ನಾವು ಭಾರತದ ನ್ಯಾಯಾಂಗ ಮತ್ತು ಸಂವಿಧಾನವನ್ನು ನಂಬಬೇಕಿದೆ. ದಯವಿಟ್ಟು ಭಾರತದ ನ್ಯಾಯಾಂಗದ ಮೇಲೆ ನಂಬಿಕೆಯಿಡಿ ಎಂದು ನಾನು ಜನರಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.

ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡಿದಂತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವ ದಿಟ್ಟ ನಿರ್ಧಾರವನ್ನು ಕೇಂದ್ರ ಸರ್ಕಾರ ಯಾಕೆ ತೆಗೆದುಕೊಳ್ಳುವುದಿಲ್ಲ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಪ್ರಶ್ನಿಸಿದ್ದರು.1992ರಿಂದಲೇ ಈ ವಿವಾದ ಇತ್ಯರ್ಥವಾಗದೆ ಬಾಕಿ ಉಳಿದಿದೆ. ರಾಮ ಮಂದಿರ ನಿರ್ಮಾಣಕ್ಕಾಗಿ ಮೊದಲ ಇಟ್ಟಿಗೆ ಇಡುವಂತೆ ಶಿವ ಸೈನಿಕರಲ್ಲಿ ಹೇಳಲಾಗಿತ್ತು ಎಂದಿದ್ದರು ಠಾಕ್ರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.