ADVERTISEMENT

ರಾಮೋಜಿ ರಾವ್‌ಗೆ ಇ.ಡಿ ಉರುಳು?

ಮಾರ್ಗದರ್ಶಿ ಚಿಟ್‌ ಫಂಡ್‌ ಅವ್ಯವಹಾರ: ತನಿಖೆ ಕೋರಿ ಇ.ಡಿ, ಐ.ಟಿಗೆ ಪತ್ರ ಬರೆದ ಆಂಧ್ರ ಸಿಐಡಿ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2023, 15:35 IST
Last Updated 12 ಏಪ್ರಿಲ್ 2023, 15:35 IST
ರಾಮೋಜಿ ರಾವ್‌ (ಸಾಂದರ್ಭಿಕ ಚಿತ್ರ)
ರಾಮೋಜಿ ರಾವ್‌ (ಸಾಂದರ್ಭಿಕ ಚಿತ್ರ)   

ನವದೆಹಲಿ (‍ಪಿಟಿಐ): ಚಿಟ್‌ ಫಂಡ್ ವ್ಯವಹಾರ ಕಾಯ್ದೆ ಹಾಗೂ ಭಾರತೀಯ ರಿಸರ್ವ್‌ ಬ್ಯಾಂಕ್‌ನ ಮಾರ್ಗಸೂಚಿ ಉಲ್ಲಂಘಿಸಿರುವ ಮಾರ್ಗದರ್ಶಿ ಚಿಟ್‌ ಫಂಡ್‌ ಕಂಪನಿಯ (ಎಂಸಿಎಫ್‌ಪಿಲ್‌) ಅವ್ಯವಹಾರದ ಬಗ್ಗೆ ಸಮಗ್ರ ತನಿಖೆ ನಡೆಸಲು ಆಂಧ್ರಪ್ರದೇಶದ ಸಿಐಡಿ ವಿಭಾಗವು ಜಾರಿ ನಿರ್ದೇಶನಾಲಯ (ಇ.ಡಿ) ಹಾಗೂ ಆದಾಯ ತೆರಿಗೆ ಇಲಾಖೆಗೆ ಪತ್ರ ಬರೆದಿದೆ.

ಮಾರ್ಗದರ್ಶಿ ಕಂಪನಿಯ ಅಧ್ಯಕ್ಷ ರಾಮೋಜಿ ರಾವ್‌, ಅವರ ಸೊಸೆ ಶೈಲಜಾ ಕಿರಣ್‌ ಸೇರಿದಂತೆ ಐವರ ವಿರುದ್ಧ ಈ ಅವ್ಯವಹಾರ ಪ್ರಕರಣ ಸಂಬಂಧ ಒಟ್ಟು ಏಳು ಎಫ್‌ಐಆರ್‌ಗಳು ದಾಖಲಾಗಿವೆ. ಠೇವಣಿದಾರರಿಂದ ಸಂಗ್ರಹಿಸಿದ ಠೇವಣಿಯನ್ನು ಷೇರು ಮಾರುಕಟ್ಟೆಯಲ್ಲಿ ವಿನಿಯೋಗಿಸಿದ ಆರೋಪ ಇವರ ಮೇಲಿದೆ. ರಾಮೋಜಿ ರಾವ್‌ ಅವರಿಗೆ ಇ.ಡಿ ಹಾಗೂ ಆದಾಯ ತೆರಿಗೆ ಇಲಾಖೆಯ ಉರುಳು ಸುತ್ತಿಕೊಳ್ಳುವ ಸಾಧ್ಯತೆ ಇದೆ.

‘ಆರ್‌ಬಿಐನ ಅನುಮತಿ ಇಲ್ಲದೆಯೇ ಮಾರ್ಗದರ್ಶಿ ಚಿಟ್‌ ಫಂಡ್‌ ಕಂಪನಿಯು ಠೇವಣಿದಾರರಿಂದ ಹೆಚ್ಚುವರಿಯಾಗಿ ಹಣ ಸಂಗ್ರಹಿಸಿದೆ. ಈ ಮೊತ್ತವನ್ನು ನಿಯಮಬಾಹಿರವಾಗಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದೆ. ನಾಗರಿಕರಿಗೆ ವಂಚಿಸಿರುವ ಇಂತಹ 17 ಚಿಟ್‌ ಫಂಡ್‌ ಕಂಪನಿಗಳು ಆಂಧ್ರಪ್ರದೇಶದಲ್ಲಿವೆ. ಅವುಗಳ ಮೇಲೆ ಇಲಾಖೆಯು ಹದ್ದಿನಕಣ್ಣು ನೆಟ್ಟಿದೆ’ ಎಂದು ಆಂಧ್ರಪ್ರದೇಶದ ಸಿಐಡಿ ವಿಭಾಗದ ಹೆಚ್ಚುವರಿ ಪ್ರಧಾನ ನಿರ್ದೇಶಕ(ಸಿಐಡಿ– ಎಡಿಜಿ) ಎನ್‌. ಸಂಜಯ್‌ ಸುದ್ದಿಗಾರರಿಗೆ ಬುಧವಾರ ತಿಳಿಸಿದರು.

ADVERTISEMENT

ಮಾರ್ಗದರ್ಶಿ ಕಂಪನಿ ಸ್ಥಾಪನೆಯಾಗಿದ್ದು 1961ರಲ್ಲಿ. ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಈ ಕಂಪನಿ ಹೊಂದಿರುವ ಶಾಖೆಗಳ ಸಂಖ್ಯೆ 108. ಆಂಧ್ರ ಮತ್ತು ತೆಲಂಗಾಣದಲ್ಲಿ 2021–22ನೇ ಸಾಲಿನಡಿ ಕಂಪನಿಯು ₹ 9,677 ಕೋಟಿ ವ್ಯವಹಾರ ನಡೆಸಿದೆ.

‘ಇ.ಡಿ ಮತ್ತು ಆದಾಯ ತೆರಿಗೆ ಇಲಾಖೆಗೆ ಸದ್ಯ ಪತ್ರ ಬರೆಯಲಾಗಿದೆ. ಖುದ್ದಾಗಿ ಭೇಟಿ ಮಾಡಿ ತನಿಖೆ ನಡೆಸುವಂತೆ ಕೋರಲಾಗುವುದು. ಕಂಪನಿಯ ನಿಯಮಬಾಹಿರ ನಡೆಯಿಂದ ಸಾವಿರಾರು ಠೇವಣಿದಾರರಿಗೆ ಅನ್ಯಾಯವಾ‌ಗಿದೆ. ಕಂಪನಿ ಎಸಗಿರುವ ಆರ್ಥಿಕ ಅಪರಾಧವನ್ನು ನೋಡಿಕೊಂಡು ರಾಜ್ಯ ಸರ್ಕಾರ ಮೌನವಾಗಿ ಕೂರುವುದಿಲ್ಲ’ ಎಂದು ಸಂಜಯ್‌ ಸ್ಪಷ್ಟಪಡಿಸಿದರು.

ಚಿಟ್‌ ಫಂಡ್‌ ಕಾಯ್ದೆ 1982ರ ಅನ್ವಯ ಕಂಪನಿಯ ಲೆಕ್ಕಪತ್ರಗಳು ಸಮರ್ಪಕವಾಗಿಲ್ಲ. ವೈಯಕ್ತಿಕ ಲಾಭಕ್ಕಾಗಿ ಕಂಪನಿಯು ಜನಸಾಮಾನ್ಯರ ಠೇವಣಿಯನ್ನು ದುರ್ಬಳಕೆ ಮಾಡಿಕೊಂಡಿದೆ. ತನಿಖೆಯಿಂದ ಈ ಅಕ್ರಮ ಬಯಲಾಗಿದೆ ಎಂದು ತಿಳಿಸಿದರು.

ಈ ನಡುವೆಯೇ ಸಿಐಡಿ ತನಿಖೆಯ ಹಿಂದೆ ಮುಖ್ಯಮಂತ್ರಿ ವೈ.ಎಸ್‌. ಜಗಮೋಹನ್‌ ರೆಡ್ಡಿ ಅವರ ಪ್ರಭಾವ ಇದೆ ಎಂದು ಕಂಪನಿಯ ಹಿರಿಯ ಅಧಿಕಾರಿಗಳು ಆರೋಪಿಸಿದ್ದಾರೆ. ರಾಮೋಜಿ ಒಡೆತನದ ‘ಈ ನಾಡು’ ಪತ್ರಿಕೆಯಲ್ಲಿ ರಾಜ್ಯ ಸರ್ಕಾರದ ವೈಫಲ್ಯಗಳ ಬಗ್ಗೆ ಪ್ರಕಟಿಸಿದ್ದೇ ಕಂಪನಿಯ ಮೇಲೆ ಸರ್ಕಾರ ತನಿಖೆಗೆ ಮುಂದಾಗಲು ಮೂಲ ಕಾರಣ’ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.