ADVERTISEMENT

ಇಚ್ಛಾಶಕ್ತಿ ಕೊರತೆಯಿಂದ ಉರುಳಿದ ಬಾಬರಿ ಮಸೀದಿ

ಪಿಟಿಐ
Published 6 ನವೆಂಬರ್ 2019, 10:45 IST
Last Updated 6 ನವೆಂಬರ್ 2019, 10:45 IST
ಬಾಬರಿ
ಬಾಬರಿ   

ನವದೆಹಲ: ‘ರಾಜಕೀಯ ಇಚ್ಛಾಶಕ್ತಿ ಇದ್ದರೆ ಬಾಬರಿ ಮಸೀದಿ ಉಳಿಸಬಹುದಿತ್ತು. ಆದರೆ, ಮಸೀದಿ ನೆಲಸಮಕ್ಕೂ ಮೊದಲು ಗೃಹ ಇಲಾಖೆ ಸಲ್ಲಿಸಿದ್ದ ‘ಸಮಗ್ರ ತುರ್ತು ಯೋಜನೆ‘ಯನ್ನು ಪ್ರಧಾನಿಯಾಗಿದ್ದ ಪಿ.ವಿ.ನರಸಿಂಹರಾವ್‌ ಒಪ್ಪಲಿಲ್ಲ’ ಎಂದು ಆಗ (1992) ಗೃಹ ಇಲಾಖೆ ಕಾರ್ಯ ದರ್ಶಿಯಾಗಿದ್ದ ಮಾಧವ್‌ ಗೋಡ್‌ಬೊಲೆ ಹೇಳಿದ್ದಾರೆ.

ಪ್ರಧಾನಮಂತ್ರಿ ಅವರ ಹಂತದಲ್ಲಿ ರಾಜಕೀಯ ಕ್ರಮವನ್ನು ಕೈಗೊಂಡಿದ್ದರೆ ‘ಈ ರಾಮಾಯಣದ ಮಹಾಭಾರತ’ವನ್ನು ತಡೆಯಬಹುದಿತ್ತು ಎಂದು ಅವರು ‘ಅಯೋಧ್ಯೆ ವಿವಾದ’ ಕುರಿತ ತಮ್ಮ ನೂತನ ಪುಸ್ತಕದಲ್ಲಿ ದಾಖಲಿಸಿದ್ದಾರೆ.

ಮಸೀದಿ ನೆಲಸಮ ಕಾರ್ಯಾಚರಣೆಗೆ ಮುನ್ನ ಮತ್ತು ನಂತರದ ಘಟನೆಗಳತ್ತ ಗಮನಸೆಳೆದಿರುವ ಅವರು, ‘ನಿರ್ಣಾಯಕ ಎನಿಸಿದ್ದ ಈ ಟೆಸ್ಟ್‌ ಮ್ಯಾಚ್‌ನಲ್ಲಿ ರಾವ್ ಪ್ರಮುಖ ಪಾತ್ರ ವಹಿಸಿದ್ದರು. ದುರದೃಷ್ಟವಶಾತ್ ಅಂತಿಮವಾಗಿ ಅವರು ಆಟವಾಡದ ನಾಯಕರಾದರು‘ ಎಂದು ಉಪಮೆ ಮೂಲಕ ಸಂದರ್ಭವನ್ನು ವ್ಯಾಖ್ಯಾನಿಸಿದ್ದಾರೆ.

ADVERTISEMENT

‘ಬಾಬರಿ ಮಸೀದಿ –ರಾಮಮಂದಿರ ಡಿಲೆಮಾ: ಆ್ಯನ್‌ ಆ್ಯಸಿಡ್‌ ಟೆಸ್ಟ್ ಫಾರ್ ಇಂಡಿಯಾ‘ಸ್ ಕಾನ್‌ಸ್ಟಿಟ್ಯೂಷನ್’ ಹೆಸರಿನ ಕೃತಿಯಲ್ಲಿ, ‘ರಾವ್ ಅವರಲ್ಲದೆ ಮಾಜಿ ಪ್ರಧಾನಿಗಳಾದ ರಾಜೀವ್‌ಗಾಂಧಿ, ವಿ.ಪಿ.ಸಿಂಗ್ ಅವರೂ ಮಸೀದಿ ಕುರಿತು ಗಂಭೀರ ಬೆದರಿಕೆ ಇದ್ದಾಗಲೂ ಸಕಾಲಿಕ ನಿಲುವು ತಳೆಯಲಿಲ್ಲ‘ ಎಂದು ಉಲ್ಲೇಖಿಸಿದ್ದಾರೆ.

ರಾಜೀವ್‌ಗಾಂಧಿ ಅವರು ಪ್ರಧಾನಿಯಾಗಿದ್ದಾಗ ವಿವಾದ ಬಗೆಹರಿಸಲು ಕೆಲ ಕಾರ್ಯಸಾಧ್ಯ ಸಮಗ್ರ ಪರಿಹಾರಕ್ರಮಗಳ ಸಲಹೆ ನೀಡಲಾಗಿತ್ತು. ಆದರೆ, ಯಾವುದೇ ನಿರ್ಧಾರ ಕೈಗೊಳ್ಳಲಿಲ್ಲ. ಬಾಬರಿ ಮಸೀದಿ ಸುತ್ತಲೂ ನಿರ್ದಿಷ್ಟ ಪ್ರದೇಶವನ್ನು ಕೇಂದ್ರ ಸುಪರ್ದಿಗೆ ವಹಿಸಿಕೊಳ್ಳುವ ಸುಗ್ರೀವಾಜ್ಞೆ ಹೊರಡಿಸಿದ ಬಳಿಕ ವಿ.ಪಿ.ಸಿಂಗ್ ಬಿಗಿ ನಿಲುವು ತಳೆದಿದ್ದರು ಎಂದು ಅವರು ಹೇಳಿದ್ದಾರೆ.

ಸಮಗ್ರ ತುರ್ತು ಯೋಜನೆಯನ್ನು ಸಂಪುಟ ಕಾರ್ಯದರ್ಶಿ, ಪ್ರಧಾನಮಂತ್ರಿ ಗಳ ಪ್ರಧಾನ ಕಾರ್ಯದರ್ಶಿ, ಹಿರಿಯ ಸಲಹೆಗಾರ, ಗೃಹ ಸಚಿವರು, ಮತ್ತು ಪ್ರಧಾನಮಂತ್ರಿ ಅವರಿಗೆ ನವೆಂಬರ್ 2ರಂದು ನೀಡಲಾಗಿತ್ತು. ಬಾಬರಿ ಮಸೀದಿ ಸುರಕ್ಷತೆಗೆ ಪೂರಕವಾಗಿ ಸಂಕೀರ್ಣ ಮತ್ತು ಸುತ್ತಲಿನ ಪ್ರದೇಶಗಳನ್ನು ಕೇಂದ್ರೀಯ ಅರೆಸೇನಾ ಪಡೆಯ ನೆರವಿನಲ್ಲಿ ತನ್ನ ನಿಯಂತ್ರಣಕ್ಕೆ ಪಡೆಯಲು ಸಕಾಲಿಕವಾದ ತೀರ್ಮಾನ ಅಗತ್ಯವಾಗಿತ್ತು. ಕರಸೇವೆ ಆರಂಭವಾಗುವ ಮೊದಲು ಕ್ರಮ ಜರುಗಿಸಬಹುದಿತ್ತು. ದೊಡ್ಡ ಸಂಖ್ಯೆಯಲ್ಲಿ ಕರಸೇವಕರು ಅಲ್ಲಿ ಸೇರುವುದನ್ನೂ ತಡೆಯಬಹುದಿತ್ತು ಎಂದು ಬರೆದಿದ್ದಾರೆ.

‘ಯೋಜನೆಯಂತೆ ಕೇಂದ್ರ ಅರೆಸೇನಾ ತುಕಡಿಯು ಕಾರ್ಯಾಚರಣೆ ಆರಂಭಿಸುವ ಮುನ್ನ ಸಂವಿಧಾನದ 356ನೇ ವಿಧಿ ಅನ್ವಯ ರಾಷ್ಟ್ರಪತಿ ಆಡಳಿತ ಹೇರುವುದು ಅಗತ್ಯವಾಗಿತ್ತು. ಆದರೆ, ತುರ್ತು ಯೋಜನೆ ಕಾರ್ಯಸಾಧುವಲ್ಲ ಎಂದು ಅಭಿಪ್ರಾಯಪಟ್ಟ ನರಸಿಂಹರಾವ್‌ ಅವರು ಅದನ್ನು ಕೈಬಿಟ್ಟರು’ ಎಂದು ಸ್ಮರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.