ADVERTISEMENT

ಕ್ರಿಮಿನಲ್ ನ್ಯಾಯದಾನ ವ್ಯವಸ್ಥೆಯ ದುರುಪಯೋಗ ಕಳವಳಕಾರಿ: ಸುಪ್ರೀಂ ಕೋರ್ಟ್

ಪಿಟಿಐ
Published 24 ನವೆಂಬರ್ 2025, 15:58 IST
Last Updated 24 ನವೆಂಬರ್ 2025, 15:58 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ವಿಫಲವಾದ ಅಥವಾ ಮುರಿದುಬಿದ್ದ ಸಂಬಂಧಗಳಿಗೆ ಕೊನೆಗೊಂದು ದಿನ ಅತ್ಯಾಚಾರದಂತಹ ಅಪರಾಧದ ಬಣ್ಣವನ್ನು ನೀಡುವ ‘ಆತಂಕಕಾರಿ ಪ್ರವೃತ್ತಿ’ಯನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. 

‘ಈ ವಿಚಾರದಲ್ಲಿ ಅಪರಾಧಿಕ ನ್ಯಾಯದಾನ ವ್ಯವಸ್ಥೆಯ ದುರುಪಯೋಗವು ಕಳವಳಕಾರಿ ಮತ್ತು ಖಂಡನಾರ್ಹ’ ಎಂದು ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಆರ್‌.ಮಹಾದೇವನ್‌ ಅವರಿದ್ದ ಪೀಠವು ಸೋಮವಾರ ತಿಳಿಸಿದೆ.

ಅತ್ಯಾಚಾರ ಪ್ರಕರಣವೊಂದರ ಎಫ್‌ಐಆರ್‌ ರದ್ದುಗೊಳಿಸಿದ ಸುಪ್ರೀಂ ಕೋರ್ಟ್, ‘ಮುರಿದುಬಿದ್ದ ಪ್ರತಿಯೊಂದು ಸಂಬಂಧವನ್ನು ಅತ್ಯಾಚಾರದ ಅಪರಾಧವಾಗಿ ಪರಿವರ್ತಿಸುವುದು ಅಪರಾಧದ ಗಂಭೀರತೆಯನ್ನು ಲಘುವಾಗಿ ಕಾಣುವಂತೆ ಮಾಡುವುದಲ್ಲದೆ, ಆರೋಪಿಯ ಮೇಲೆ ಅಳಿಸಲಾಗದ ಕಳಂಕವನ್ನು ಉಂಟುಮಾಡುತ್ತದೆ’ ಎಂದಿದೆ.

ADVERTISEMENT

ನಿಜವಾದ ಲೈಂಗಿಕ ದೌರ್ಜನ್ಯ, ಬಲವಂತ ನಡೆದಿರುವ ಅಥವಾ ಪರಸ್ಪರ ಸಮ್ಮತಿಯಿಲ್ಲದ ಪ್ರಕರಣಗಳಿಗೆ ಮಾತ್ರ ಅತ್ಯಾಚಾರದ ಅಪರಾಧವನ್ನು ಅನ್ವಯಿಸಹುದು ಎಂದು ಪೀಠವು ಹೇಳಿತು.

2025ರ ಮಾರ್ಚ್‌ನಲ್ಲಿ ಬಾಂಬೆ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ತನ್ನ ತೀರ್ಪು ನೀಡಿದೆ. ಛತ್ರಪತಿ ಸಂಭಾಜಿನಗರದಲ್ಲಿ 2024ರ ಆಗಸ್ಟ್‌ನಲ್ಲಿ ದಾಖಲಾಗಿದ್ದ ಎಫ್‌ಐಆರ್‌ ರದ್ದುಗೊಳಿಸುವಂತೆ ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು.

‘ಇದು ಮೇಲ್ಮನವಿದಾರ (ಪುರುಷ) ಪ್ರತಿವಾದಿಗೆ (ಮಹಿಳೆ) ಆಮಿಷವೊಡ್ಡಿ ದೈಹಿಕ ಸುಖ ಪಡೆದು, ಆ ಬಳಿಕ ಆಕೆಯಿಂದ ದೂರವಾದ ಪ್ರಕರಣ ಅಲ್ಲ ಎಂಬುದನ್ನು ನಾವು ಕಂಡುಕೊಂಡಿದ್ದೇವೆ. ಇಬ್ಬರ ನಡುವಿನ ಸಂಬಂಧ ಮೂರು ವರ್ಷ ಮುಂದುವರಿಯಿತು. ಮೂರು ವರ್ಷಗಳು ದೀರ್ಘ ಅವಧಿಯಾಗಿದೆ’ ಎಂದು ಪೀಠ ತಿಳಿಸಿತು.

ಇಂತಹ ಪ್ರಕರಣಗಳಲ್ಲಿ, ಸಂಬಂಧವು ಮದುವೆಯಲ್ಲಿ ಕೊನೆಗೊಳ್ಳಲು ವಿಫಲವಾಗಿದೆ ಎಂಬ ಕಾರಣಕ್ಕೆ ಇಬ್ಬರ ನಡುವಿನ ದೈಹಿಕ ಅನ್ಯೋನ್ಯತೆಯನ್ನು ಅತ್ಯಾಚಾರದ ಅಪರಾಧವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.