ಇಲಿ (ಸಾಂಕೇತಿಕ ಚಿತ್ರ)
ಇಂದೋರ್: ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ಮಹಾರಾಜ ಯಶವಂತರಾವ್ ಆಸ್ಪತ್ರೆಯಲ್ಲಿ ಇಲಿ ಕಚ್ಚಿ ನವಜಾತ ಶಿಶುಗಳ ಸಾವು ಸಂಭವಿಸಿದೆ. ಆಕ್ರೋಶಗೊಂಡ ಪಾಲಕರು ಆಸ್ಪತ್ರೆಯ ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಧರಣಿ ಆರಂಭಿಸಿದ್ದಾರೆ.
75 ವರ್ಷಗಳ ಇತಿಹಾಸ ಇರುವ ಮಹಾರಾಜ ಯಶವಂತರಾವ್ ಆಸ್ಪತ್ರೆಯನ್ನು ರಾಜ್ಯ ಸರ್ಕಾರದ ಮಹಾತ್ಮಾ ಗಾಂಧಿ ಸ್ಮಾರಕ ವೈದ್ಯಕೀಯ ಕಾಲೇಜಿನೊಂದಿಗೆ ಜೋಡಿಸಲಾಗಿದೆ. ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದ್ದ ಇಬ್ಬರು ಹೆಣ್ಣುಮಕ್ಕಳಿಗೆ ಇಲಿ ಕಚ್ಚಿದೆ. ಒಂದು ಮಗುವಿನ ಬೆರಳಿಗೆ ಕಚ್ಚಿದರೆ, ಮತ್ತೊಂದು ಮಗುವಿನ ಭುಜಕ್ಕೆ ಇಲಿ ಕಚ್ಚಿದೆ. ನಂತರ ಮಕ್ಕಳು ಮೃತಪಟ್ಟಿವೆ ಎಂದು ಆರೋಪಿಸಿ ಜೈ ಆದಿವಾಸಿ ಯುವ ಶಕ್ತಿ ಪ್ರತಿಭಟನೆ ಆರಂಭಿಸಿದೆ.
ಕಾಲೇಜಿನ ಡೀನ್ ಡಾ. ಅರವಿಂದ ಘಂಘೋರಿಯಾ ಮತ್ತು ಸೂಪರಿಂಟೆಂಡೆಂಟ್ ಡಾ. ಅಶೋಕ್ ಯಾದವ್ ವಿರುದ್ಧ ಕ್ರಮಕ್ಕೆ ಪ್ರತಿಭಟನಕಾರರು ಒತ್ತಾಯಿಸಿದ್ದಾರೆ.
‘ಆದಿವಾಸಿ ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಪಾಲಕರ ಮಕ್ಕಳಿಗೆ ಆರೋಗ್ಯ ಸಮಸ್ಯೆ ಇತ್ತು. ಯಾವುದೇ ಅಜಾಗರೂಕತೆಯಿಂದ ಸಾವು ಸಂಭವಿಸಿಲ್ಲ. ಆದರೆ ಪ್ರತಿಭಟನೆ ನಡೆಸುತ್ತಿರುವುದರಿಂದ ಜನರಿಗೆ ಆಸ್ಪತ್ರೆಯೊಳಗೆ ಬಂದು ಚಿಕಿತ್ಸೆ ಪಡೆಯಲು ಕಷ್ಟವಾಗುತ್ತಿದೆ. ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ನಡೆಸಲಾಯಿತಾದರೂ, ಅದು ಫಲ ನೀಡಲಿಲ್ಲ’ ಎಂದು ಆಸ್ಪತ್ರೆಯ ಸೂಪರಿಂಟೆಂಡೆಂಟ್ ಹೇಳಿದ್ದಾರೆ.
‘ಮೃತ ಶಿಶುಗಳು ಉಸಿರಾಟ ಸಮಸ್ಯೆ ಸಹಿತ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದವು. ಘಟನೆಗೆ ಸಂಬಂಧಿಸಿದಂತೆ ಎಂಟು ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗಿದೆ. ಕೆಲವರನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ. ಸೂಪರಿಂಟೆಂಡೆಂಟ್ ಡಾ. ಅಶೋಕ್ ಯಾದವ್ ಅವರನ್ನು ದೀರ್ಘ ರಜೆ ಮೇಲೆ ಕಳುಹಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.