ನರೇಂದ್ರ ಮೋದಿ
ಪಿಟಿಐ ಚಿತ್ರ
ನವದೆಹಲಿ: ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಖಾಸಗಿ ಕ್ಷೇತ್ರದ ಹೂಡಿಕೆ ಉತ್ತೇಜಿಸುವ ನಿಟ್ಟಿನಲ್ಲಿ ₹1 ಲಕ್ಷ ಕೋಟಿ ಮೊತ್ತದ RDI ನಿಧಿಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಚಾಲನೆ ನೀಡಿದರು.
ವಿಕಸಿತ ಭಾರತ 2047 ದೂರದೃಷ್ಟಿ ಕಾರ್ಯಕ್ರಮದ ಭಾಗವಾಗಿ ನೀತಿ ನಿರೂಪಕರು, ಅನ್ವೇಷಕರು ಮತ್ತು ಜಾಗತಿಕ ಮಟ್ಟದ ದಾರ್ಶನಿಕರನ್ನು ಒಂದೇ ವೇದಿಕೆಗೆ ಕರೆತಂದ ವಿಜ್ಞಾನ ತಂತ್ರಜ್ಞಾನ ಮತ್ತು ಅನ್ವೇಷಣೆ ಸಮಾವೇಶದಲ್ಲಿ (ESTIC) ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆ (RDI) ನಿಧಿಯನ್ನು ಪ್ರಧಾನಿ ಘೋಷಿಸಿದರು.
ಭಾರತದ ವೈಜ್ಞಾನಿಕ ಸಾಧನೆ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನದ ದೂರದೃಷ್ಟಿಯ ದಾಖಲೆಯನ್ನೊಳಗೊಂಡ ಕಾಫಿ ಟೇಬಲ್ ಬುಕ್ ಅನ್ನೂ ಇದೇ ಸಂದರ್ಭದಲ್ಲಿ ಅವರು ಬಿಡುಗಡೆ ಮಾಡಿದರು.
ಆರ್‌ಡಿಐ ನಿಧಿಯನ್ನು ಎರಡು ಹಂತಗಳಲ್ಲಿ ನಿರ್ವಹಿಸಲು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನೋಡಲ್ ಸಚಿವಾಲಯವಾಗಿ ಕಾರ್ಯ ನಿರ್ವಹಿಸಲಿದೆ. ಮೊದಲ ಹಂತದಲ್ಲಿ, ವಿಶೇಷ ಉದ್ದೇಶದ ನಿಧಿಯನ್ನು ಸ್ಥಾಪಿಸಲಾಗುತ್ತದೆ. ಇದರಡಿ ಅನುಸಂಧಾನ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ (ANRF) ಸ್ಥಾಪಿಸಲಾಗಿದೆ. ಇದು ₹1 ಲಕ್ಷ ಕೋಟಿ ಮೊತ್ತದ ನಿಧಿಯ ರಕ್ಷಕನಾಗಿ ಕೆಲಸ ಮಾಡಲಿದೆ.
ಈ ನಿಧಿಯನ್ನು ಕೈಗಾರಿಕೆಯಲ್ಲಿ ನೇರವಾಗಿ ಹೂಡಿಕೆ ಮಾಡುವುದಿಲ್ಲ. ಬದಲಿಗೆ, ಮೂಲ ಧನವನ್ನು ಎರಡನೇ ಹಂತದ ನಿಧಿ ವ್ಯವಸ್ಥಾಪಕರಿಗೆ ವರ್ಗಾಯಿಸಲಿದೆ. ಇವರು ಪರ್ಯಾಯ ಹೂಡಿಕೆ ನಿಧಿಗಳು (AIF), ಅಭಿವೃದ್ಧಿ ಹಣಕಾಸು ಸಂಸ್ಥೆಗಳು (DFI) ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳು (NBFCs) ಇತ್ಯಾದಿಗಳಾಗಿರಬಹುದು.
ಸರ್ಕಾರದಿಂದಲೇ ನಿರ್ವಹಣೆಗೆ ಒಳಪಡುವ ಆರ್ಥಿಕ, ವ್ಯಾವಹಕಾರಿಕ ಮತ್ತು ತಾಂತ್ರಿಕ ಕ್ಷೇತ್ರದ ಪರಿಣಿತರನ್ನು ಒಳಗೊಂಡ ಹೂಡಿಕೆ ಸಮಿತಿಗಳ ಮೂಲಕ ಎರಡನೇ ಹಂತದ ನಿಧಿ ವ್ಯವಸ್ಥಾಪಕರಿಗೆ ನಿಧಿ ವರ್ಗಾಯಿಸಲಾಗುತ್ತದೆ.