ಅಹಮದಾಬಾದ್: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಶತಮಾನೋತ್ಸವ ಕಾರ್ಯಕ್ರಮವನ್ನು ಮಹಾತ್ಮ ಗಾಂಧಿ ಸ್ಥಾಪಿಸಿದ ‘ಗುಜರಾತ್ ವಿದ್ಯಾಪೀಠ’ದ ಕ್ಯಾಂಪಸ್‌ನಲ್ಲಿ ಮೊದಲ ಬಾರಿಗೆ ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ಆರ್‌ಎಸ್‌ಎಸ್‌ನ ಶತಮಾನೋತ್ಸವ ಆಚರಣೆಯ ಭಾಗವಾಗಿದ್ದು, ಇದಕ್ಕಾಗಿ ಆಹ್ವಾನ ಪತ್ರಗಳನ್ನು ಆರ್‌ಎಸ್‌ಎಸ್ ಕಳುಹಿಸಿದೆ.
ಕ್ಯಾಂಪಸ್‌ನಲ್ಲಿ ಕಾರ್ಯಕ್ರಮ ನಡೆಯುವುದನ್ನು ಖಚಿತಪಡಿಸಿದ ಆರ್‌ಎಸ್‌ಎಸ್‌ನ ಪದಾಧಿಕಾರಿಯೊಬ್ಬರು, ವಿಶ್ವವಿದ್ಯಾಲಯದ ಕುಲಪತಿ ಹರ್ಷದ್ ಪಟೇಲ್ ಅವರಿಗೆ ಈ ಬಗ್ಗೆ ಮನವಿ ಮಾಡಲಾಗಿತ್ತು. ಅವರು ಅನುಮತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಿದರೂ ಹರ್ಷದ್ ಪಟೇಲ್ ಲಭಿಸಲಿಲ್ಲ. ಆಹ್ವಾನ ಪತ್ರಿಕೆಯಲ್ಲಿ ‘ಗುಜರಾತ್ ವಿದ್ಯಾಪೀಠ, ಕರ್ಣಾವತಿ’ ಎಂಬ ವಿಳಾಸವಿದೆ. ಅಹಮದಾಬಾದ್‌ಗೆ ಕರ್ಣಾವತಿ ಎಂಬ ಪರ್ಯಾಯ ಹೆಸರನ್ನು ಆರ್‌ಎಸ್‌ಎಸ್ ಬಳಕೆ ಮಾಡುತ್ತದೆ.
ಈ ಹಿಂದೆ ಗಾಂಧೀಜಿಯ ಮರಿ ಮೊಮ್ಮಗ ತುಷಾರ್ ಗಾಂಧಿ ಸೇರಿದಂತೆ, ಸರ್ಕಾರದ ಟೀಕಾಕಾರರಿಗೆ ಭಾಷಣ ಮಾಡಲು ವಿಶ್ವವಿದ್ಯಾಲಯವು ಅನುಮತಿ ನಿರಾಕರಿಸಿದ ಕಾರಣಕ್ಕೆ ಸುದ್ದಿಯಾಗಿತ್ತು.
ಹೆಸರು ಬಹಿರಂಗಪಡಿಸಲು ಬಯಸದ, ವಿಶ್ವವಿದ್ಯಾನಿಲಯದ ಮಾಜಿ ಕುಲಪತಿಯೊಬ್ಬರು ‘ನಾವು ಯಾವಾಗಲೂ ಸ್ಥಾಪಕರ (ಗಾಂಧಿ) ಸರ್ವ ಧರ್ಮ ಸಂಭವ (ಎಲ್ಲಾ ಧರ್ಮಗಳಿಗೆ ಗೌರವ) ಮತ್ತು ಸರಳತೆಯ ಮೌಲ್ಯಗಳನ್ನು ಅನುಸರಿಸಿಕೊಂಡು ಬಂದಿದ್ದೆವು. ಸಂಘ ಪರಿವಾರದ ಸಾರ್ವಜನಿಕ ಕಾರ್ಯಕ್ರಮಕ್ಕೆ ಕ್ಯಾಂಪಸ್‌ನಲ್ಲಿ ಅವಕಾಶ ನೀಡಿರುವುದು ಇದೇ ಮೊದಲು’ ಎಂದು ಹೇಳಿದ್ದಾರೆ.
ಅಹಮದಾಬಾದ್ ನಗರದಲ್ಲಿರುವ ಈ ವಿದ್ಯಾಪೀಠವನ್ನು ಮಹಾತ್ಮ ಗಾಂಧಿಯವರು 1920ರಲ್ಲಿ ಸ್ಥಾಪಿಸಿದ್ದು, ಇದು ಡೀಮ್ಡ್ ವಿಶ್ವವಿದ್ಯಾಲಯದ ಸ್ಥಾನಮಾನ ಹೊಂದಿದೆ. ಇದರ ಕ್ಯಾಂಪಸ್‌ಲ್ಲಿ ಇದೇ 22 ರಂದು ಆರ್‌ಎಸ್‌ಎಸ್‌ನ ಗುಜರಾತ್ ಘಟಕವು ‘ಸಜ್ಜನ ಶಕ್ತಿ ಸಂಗಮ’ ಕಾರ್ಯಕ್ರಮವನ್ನು ಆಯೋಜಿಸಿದೆ. ಇದರಲ್ಲಿ ಸಮಾಜದ ವಿವಿಧ ಕ್ಷೇತ್ರಗಳ ಪ್ರಮುಖರು ಪಾಲ್ಗೊಳ್ಳಲಿದ್ದು, ಗುಜರಾತ್ ವಿದ್ಯಾಪೀಠದಲ್ಲಿ ಸಾಮಾಜಿಕ ಸಾಮರಸ್ಯ, ಪರಿಸರ ಸಂರಕ್ಷಣೆ ಮತ್ತು ಸ್ಥಳೀಯವಾಗಿ ತಯಾರಿಸಿದ ಉತ್ಪನ್ನಗಳ ಬಳಕೆ ಕುರಿತು ಚರ್ಚೆ ನಡೆಸಲಿದ್ದಾರೆ.
ವಿದ್ಯಾಪೀಠದಲ್ಲಿ ಈಗ ಆರ್‌ಎಸ್‌ಎಸ್ ತನ್ನ ಕಾರ್ಯಕ್ರಮ ಆಯೋಜಿಸುವ ಮೂಲಕ ಗಾಂಧೀಜಿಯವರ ಸಿದ್ಧಾಂತ ಪಾಲಿಸಲು ಪ್ರಾರಂಭಿಸುತ್ತದೆಯೇ? ಅದು ತೋರುತ್ತಿಲ್ಲಸುದರ್ಶನ್ ಅಯ್ಯಂಗಾರ್ ಗುಜರಾತ್ ವಿದ್ಯಾಪೀಠದ ವಿಶ್ರಾಂತ ಕುಲಪತಿ
ಇದು ಅನಗತ್ಯ ವಿವಾದ. ಆರ್‌ಎಸ್‌ಎಸ್‌ನ 100ನೇ ವರ್ಷಾಚರಣೆಯ ಸಂದರ್ಭದಲ್ಲಿ ಪ್ರತಿ ಜಿಲ್ಲೆಯಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ ವಕ್ತಾರ ವಿಜಯ್ ಠಾಕೇರ್ ಆರ್‌ಎಸ್‌ಎಸ್ ಗುಜರಾತ್ ವಿಭಾಗ
ಇದು ಅನಗತ್ಯ ವಿವಾದ. ಆರ್‌ಎಸ್‌ಎಸ್‌ನ 100ನೇ ವರ್ಷಾಚರಣೆಯ ಸಂದರ್ಭದಲ್ಲಿ ಪ್ರತಿ ಜಿಲ್ಲೆಯಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆವಕ್ತಾರ ವಿಜಯ್ ಠಾಕೇರ್ ಆರ್‌ಎಸ್‌ಎಸ್ ಗುಜರಾತ್ ವಿಭಾಗ
ವಿದ್ಯಾಪೀಠದ ಮಾಜಿ ಕುಲಪತಿ ಆಕ್ಷೇಪ
ಗುಜರಾತ್ ವಿದ್ಯಾಪೀಠದಲ್ಲಿ ಆರ್‌ಎಸ್‌ಎಸ್‌ನ ಕಾರ್ಯಕ್ರಮ ನಡೆಸಲು ಅನುಮತಿ ನೀಡಿರುವುದಕ್ಕೆ ಗಾಂಧಿವಾದಿ ಮತ್ತು ಗುಜರಾತ್ ವಿದ್ಯಾಪೀಠದ ವಿಶ್ರಾಂತ ಕುಲಪತಿ ಸುದರ್ಶನ್ ಅಯ್ಯಂಗಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಬಲಪಂಥೀಯ ಸಂಘಟನೆಯು ತನ್ನ ಪ್ರಾಬಲ್ಯ ತೋರಿಸಲು ಈ ಸ್ಥಳ ಆಯ್ದುಕೊಂಡಿದೆ’ ಎಂದು ಅಯ್ಯಂಗಾರ್ ಟೀಕಿಸಿದ್ದರೆ ಕಾರ್ಯಕ್ರಮದಲ್ಲಿ ಚರ್ಚಿಸಲಿರುವ ವಿಷಯಗಳು ಮಹಾತ್ಮ ಗಾಂಧಿಯವರ ಸಿದ್ಧಾಂತಕ್ಕೆ ಬೆಸೆದುಕೊಂಡಿವೆ ಎಂದು ಆರ್‌ಎಸ್‌ಎಸ್ ಹೇಳಿದೆ. ಮತ್ತೊಂದೆಡೆ ವಿಶ್ವವಿದ್ಯಾನಿಲಯವು ‘ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗಾಗಿ ತನ್ನ ಆವರಣದ ಒಂದು ಭಾಗವನ್ನು ಹೊರಗಿನವರಿಗೆ ಬಾಡಿಗೆಗೆ ನೀಡಲಾಗುತ್ತದೆ. ಹೊರಗಿನ ಸಂಸ್ಥೆಗಳು ಆಯೋಜಿಸುವ ಕಾರ್ಯಕ್ರಮಗಳಿಗೂ ವಿ.ವಿಗೂ ಯಾವುದೇ ಸಂಬಂಧವಿಲ್ಲ’ ಎಂದು ಹೇಳಿಕೆಯಲ್ಲಿ ತಿಳಿಸಿದೆ. ‘ಆರ್‌ಎಸ್‌ಎಸ್‌ನ ಸಿದ್ಧಾಂತವು ಗಾಂಧಿ ತತ್ವಕ್ಕೆ ಸಂಪೂರ್ಣ ವಿರುದ್ಧವಾಗಿದೆ. ಈ ಕಾರ್ಯಕ್ರಮ ಆಯೋಜಿಸಲು ಹಲವು ಸ್ಥಳಗಳಿದ್ದವು. ಆದರೂ ಗುಜರಾತ್ ವಿದ್ಯಾಪೀಠವು ಈಗ ತಮ್ಮ ಅಧೀನದಲ್ಲಿದೆ ಎಂದು ಸಾಬೀತುಪಡಿಸಲು ಹೊರಟಿರುವುದು ಸ್ಪಷ್ಟ’ ಎಂದು ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಅಯ್ಯಂಗಾರ್ ಅವರು 2005 ರಿಂದ 2014 ರವರೆಗೆ ವಿದ್ಯಾಪೀಠದ ಕುಲಪತಿಯಾಗಿದ್ದರು. ಅವರು 2000 ರಿಂದ 2022 ರವರೆಗೆ ಸಂಸ್ಥೆಯ ಟ್ರಸ್ಟಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಕುಲಪತಿ ಮತ್ತು ಟ್ರಸ್ಟಿ ಆಗಿದ್ದ ತನ್ನ ಅವಧಿಯಲ್ಲಿ ವಿ.ವಿಯ ಆವರಣದಲ್ಲಿ ಆರ್‌ಎಸ್‌ಎಸ್‌ನ ಯಾವುದೇ ಕಾರ್ಯಕ್ರಮ ನಡೆದಿಲ್ಲವೆಂದು ಅಯ್ಯಂಗಾರ್ ಹೇಳಿದ್ದಾರೆ. ‘ಈ ಹಿಂದೆ ನಾವು ಗಾಂಧೀಜಿ ಸ್ಥಾಪಿತ ನವಜೀವನ್ ಟ್ರಸ್ಟ್ ನಡೆಸುತ್ತಿದ್ದ ಕೆಫೆಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದೆವು. ಕಾರ್ಯಕ್ರಮದಲ್ಲಿ ಚರ್ಚಿಸುವ ಸಾಮಾಜಿಕ ಸಾಮರಸ್ಯ ಮತ್ತು ದೇಶೀಯ ಅಥವಾ ಸ್ವದೇಶಿ ಉತ್ಪನ್ನಗಳ ಬಳಕೆ ಪ್ರೋತ್ಸಾಹಿಸುವ ವಿಷಯಗಳು ಮಹಾತ್ಮ ಗಾಂಧಿಯವರ ಸಿದ್ಧಾಂತಕ್ಕೆ ಅನುಗುಣವಾಗಿವೆ. ಹೀಗಿರುವಾಗ ಈ ಕಾರ್ಯಕ್ರಮವು ಗಾಂಧೀಜಿಯವರ ಮೌಲ್ಯಗಳಿಗೆ ಹೇಗೆ ವಿರುದ್ಧವಾಗಿದೆ’ ಎಂದು ಆರ್‌ಎಸ್‌ಎಸ್ ಗುಜರಾತ್ ಘಟಕದ ವಕ್ತಾರ ವಿಜಯ್ ಠಾಕೇರ್ ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.