ADVERTISEMENT

Winter Session Of Parliament: ‘ಸಮರ’ಕ್ಕೆ ಸರ್ಕಾರ, ವಿರೋಧ ಪಕ್ಷಗಳು ಸಜ್ಜು

ಪಿಟಿಐ
Published 2 ಡಿಸೆಂಬರ್ 2023, 10:44 IST
Last Updated 2 ಡಿಸೆಂಬರ್ 2023, 10:44 IST
ಸಂಸತ್‌ ಅಧಿವೇಶನ
ಸಂಸತ್‌ ಅಧಿವೇಶನ   

ನವದೆಹಲಿ: ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ಸೋಮವಾರದಿಂದ ಆರಂಭವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮತ್ತೊಂದು ಸುತ್ತಿನ ‘ಸಮರ’ಕ್ಕೆ ಸರ್ಕಾರ ಹಾಗೂ ವಿರೋಧ ಪಕ್ಷಗಳು ಸಜ್ಜಾಗಿವೆ. 

ಅಧಿವೇಶನದಲ್ಲಿ ಸುಗಮ ಕಲಾಪವನ್ನು ವಿಪಕ್ಷಗಳು ಖಾತ್ರಿಪಡಿಸಬೇಕು ಎಂದು ಹೇಳಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ಎಲ್ಲ ವಿಷಯಗಳ ಕುರಿತು ಚರ್ಚಿಸಲು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ.

ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಶನಿವಾರ ಸರ್ವಪಕ್ಷಗಳ ನಾಯಕರ ಸಭೆ ಏರ್ಪಡಿಸಿತ್ತು. 23 ಪಕ್ಷಗಳ 30 ನಾಯಕರು ಸಭೆಯಲ್ಲಿ ಭಾಗಿಯಾಗಿದ್ದರು. ಎಲ್ಲ ವಿಷಯಗಳ ಕುರಿತು ಚರ್ಚೆ ನಡೆಸಲು ಸರ್ಕಾರ ಸಿದ್ಧವಿರುವುದಾಗಿ ವಿಪಕ್ಷಗಳಿಗೆ ಮನವರಿಕೆ ಮಾಡಲಾಗಿದೆ ಎಂದು ಜೋಶಿ ಹೇಳಿದರು.

ADVERTISEMENT

‘ರಚನಾತ್ಮಕ ಚರ್ಚೆಗೆ ಸರ್ಕಾರ ಸಿದ್ಧವಾಗಿದೆ. ಕಲಾಪ ಸುಗಮವಾಗಿ ನಡೆಯಲು ಸಹಕಾರ ನೀಡುವಂತೆ ಪ್ರತಿಪಕ್ಷಗಳಿಗೆ ಮನವಿ ಮಾಡಲಾಗಿದೆ. ವಿಪಕ್ಷಗಳ ಸಲಹೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಲಾಗಿದೆ’ ಎಂದೂ ಅವರು ಹೇಳಿದರು. 

ಅಧಿವೇಶನ ಡಿ.22ರ ವರೆಗೆ (ಒಟ್ಟು 15 ದಿನಗಳ ಕಾಲ) ನಡೆಯಲಿದೆ. ಅಧಿವೇಶನದಲ್ಲಿ 19 ಮಸೂದೆಗಳು ಮತ್ತು ಎರಡು ಹಣಕಾಸು ವಿಷಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಜೋಶಿ ಮಾಹಿತಿ ನೀಡಿದರು. 

ಗಡಿಯಲ್ಲಿ ಚೀನಾ ಆಕ್ರಮಣ, ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ, ಬೆಲೆ ಏರಿಕೆ ಮತ್ತು ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆ, ರಾಜ್ಯ ಸರ್ಕಾರಗಳ ಆಡಳಿತದಲ್ಲಿ ರಾಜ್ಯಪಾಲರ ಹಸ್ತಕ್ಷೇಪ, ಪ್ಯಾಲೆಸ್ಟೀನ್‌ ವಿಷಯದಲ್ಲಿ ಸರ್ಕಾರದ ನಡೆ ಸೇರಿದಂತೆ ವಿವಾದಾತ್ಮಕ ವಿಷಯಗಳ ಚರ್ಚೆಗೆ ವಿರೋಧ ಪಕ್ಷಗಳು ಪಟ್ಟು ಹಿಡಿಯಲಿವೆ ಎಂದು ಮೂಲಗಳು ಹೇಳಿವೆ. 

ಮೊಯಿತ್ರಾ ಉಚ್ಚಾಟನೆಗೆ ಶಿಫಾರಸು: ಚರ್ಚೆಗೆ ಪಟ್ಟು

‘ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಉಚ್ಚಾಟಿಸುವಂತೆ ಸಂಸತ್ತಿನ ನೀತಿ ಸಮಿತಿ ಮಾಡಿರುವ ಶಿಫಾರಸಿನ ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆಸಬೇಕು. ಚರ್ಚೆ ಬಳಿಕವೇ ಉಚ್ಚಾಟನೆ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ಟಿಎಂಸಿ ನಾಯಕರಾದ ಸುದೀಪ್‌ ಬಂಡೋಪಾಧ್ಯಾಯ ಹಾಗೂ ಡೆರಿಕ್‌ ಒಬ್ರಯಾನ್‌ ಅವರು  ಸರ್ವಪಕ್ಷಗಳ ನಾಯಕರ ಸಭೆಯಲ್ಲಿ ಆಗ್ರಹಿಸಿದ್ದಾರೆ. ಇದಕ್ಕೆ ವಿಪಕ್ಷಗಳ ಉಳಿದ ನಾಯಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಇಬ್ಬರು ಎಎಪಿ ಸಂಸದರಾದ ಸಂಜಯ್ ಸಿಂಗ್ ಮತ್ತು ರಾಘವ್ ಚಡ್ಡಾ ಅವರ ಅಮಾನತು ಬಗ್ಗೆಯೂ ಅವರು ಪ್ರಸ್ತಾಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.