ADVERTISEMENT

ಚೀನಾ–ಪಾಕಿಸ್ತಾನದ ಗಡಿ ಸಮೀಪವೇ ಐಎಎಫ್ ವಾಯುನೆಲೆ; ಆಕ್ರಮಣ ಎದುರಿಸಲು ಸಜ್ಜು

ಏಜೆನ್ಸೀಸ್
Published 25 ಸೆಪ್ಟೆಂಬರ್ 2020, 15:21 IST
Last Updated 25 ಸೆಪ್ಟೆಂಬರ್ 2020, 15:21 IST
ಮುಂಚೂಣಿ ವಾಯುನೆಲೆಯಲ್ಲಿ ಭಾರತೀಯ ವಾಯುಪಡೆ ವಿಮಾನ
ಮುಂಚೂಣಿ ವಾಯುನೆಲೆಯಲ್ಲಿ ಭಾರತೀಯ ವಾಯುಪಡೆ ವಿಮಾನ   

ಮುಂಚೂಣಿ ವಾಯುನೆಲೆ (ಪಾಕ್‌ ಆಕ್ರಮಿತ ಕಾಶ್ಮೀರ–ಚೀನಾ ಗಡಿ ಪ್ರದೇಶದ ಸಮೀಪ): ಅಕಸ್ಮಾತ್‌ ಚೀನಾ ಮತ್ತು ಪಾಕಿಸ್ತಾನ ಒಟ್ಟಿಗೆ ಭಾರತದ ಮೇಲೆ ಆಕ್ರಮಣ ನಡೆಸಿದರೂ ಏಕಕಾಲದಲ್ಲಿ ಎರಡೂ ಕಡೆ ಕಾರ್ಯಾಚರಣೆ ನಡೆಸಲು ಭಾರತದ ವಾಯುಪಡೆ ಸಜ್ಜಾಗಿದೆ.

ಪಾಕಿಸ್ತಾನದಿಂದ ಸುಮಾರು 50 ಕಿ.ಮೀ. ದೂರ ಹಾಗೂ ದೌಲತ್‌ ಬೇಗ್ ಓಲ್ಡಿ ನೆಲೆಗೆ ಸುಮಾರು 80 ಕಿ.ಮೀ. ದೂರದಲ್ಲಿನ ಮುಂಚೂಣಿ ನೆಲೆಯಲ್ಲಿ ವಾಯುಪಡೆ ಕಾರ್ಯಾಚರಣೆಗೆ ಸಿದ್ಧತೆ ನಡೆಸಿದೆ. ಇಲ್ಲಿಂದ ರಾತ್ರಿ–ಹಗಲು ಯುದ್ಧ ವಿಮಾನಗಳು, ಸರಕು ಸಾಗಣೆ ವಿಮಾನಗಳು ಹಾಗೂ ಹೆಲಿಕಾಪ್ಟರ್‌ಗಳು ಹಾರಾಟ ನಡೆಸುತ್ತಿವೆ.

ಸುಖೋಯ್‌ ಎಸ್‌ಯು–30ಎಂಕೆಐ, ಸರಕು ಸಾಗಣೆ ವಿಮಾನಗಳಾದ ಸಿ–130ಜೆ ಸೂಪರ್‌ ಹರ್ಕುಲೆಸ್‌, ಇಲ್ಯುಶಿನ್‌–76 ಹಾಗೂ ಆ್ಯಂಟನ್‌–32 ವಿಮಾನಗಳ ಕಾರ್ಯಾಚರಣೆ ನಡೆಯುತ್ತಿರುವುದನ್ನು ಎಎನ್ಐ ಸುದ್ದಿ ಮಾಧ್ಯಮ ವಿಡಿಯೊ ಸಹಿತ ವರದಿ ಮಾಡಿದೆ.

ADVERTISEMENT

ಚೀನಾದೊಂದಿಗೆ ಗಡಿ ಪ್ರದೇಶದಲ್ಲಿ ಸಂಘರ್ಷ ಮುಂದುವರಿದಿದ್ದು, ಯುದ್ಧ ವಿಮಾನಗಳು ಹಗಲು ಮತ್ತು ರಾತ್ರಿ ಹಾರಾಟ ನಡೆಸುತ್ತಿವೆ. ಮುಂಚೂಣಿ ನೆಲೆಗೆ ಮತ್ತು ಇಲ್ಲಿಂದ ಸರಕು ಸಾಗಣೆ ವಿಮಾನಗಳು ಶಸ್ತ್ರಾಸ್ತ್ರಗಳು ಹಾಗೂ ಆಹಾರ ಪದಾರ್ಥಗಳನ್ನು ತಲುಪಿಸುವ ವ್ಯವಸ್ಥೆ ಮಾಡುತ್ತಿವೆ. ಗಡಿ ವಾಸ್ತವ ರೇಖೆಯಲ್ಲಿ ಭದ್ರತೆಗೆ ನಿಯೋಜನೆಯಾಗಿರುವ ಸಿಬ್ಬಂದಿಗೆ ಅಗತ್ಯವಿರುವ ಎಲ್ಲವೂ ಇಲ್ಲಿಂದ ರವಾನೆಯಾಗುತ್ತಿದೆ.

ಪಾಕಿಸ್ತಾನದ ಸ್ಕರ್ದು ವಾಯುನೆಲೆಯಿಂದ ಎದುರಾಗಬಹುದಾದ ಅಪಾಯಗಳ ಬಗ್ಗೆ ಫ್ಲೈಟ್ ಲೆಫ್ಟಿನೆಂಟ್‌ ದರ್ಜೆಯ ವಾಯುಪಡೆಯ ಪಡೆಯ ಪೈಲಟ್‌ವೊಬ್ಬರನ್ನು ಪ್ರಶ್ನಿಸಿದಾಗ, 'ಭಾರತೀಯ ವಾಯುಪಡೆ ಸಕಲ ರೀತಿಯಲ್ಲಿ ತರಬೇತಿ ಹೊಂದಿದ್ದು, ಎರಡೂ ಕಡೆಯಿಂದ ಯಾವುದೇ ಕಾರ್ಯಾಚರಣೆಗೂ ಸಿದ್ಧವಿದೆ' ಎಂದಿದ್ದಾರೆ.

ಮುಂಚೂಣಿ ನೆಲೆಯಿಂದ ರಾತ್ರಿ ಸಮಯದಲ್ಲಿಯೂ ಕಠಿಣ ಕಾರ್ಯಾಚರಣೆಗಳನ್ನು ನಡೆಸುವ ಸಾಮರ್ಥ್ಯವಿದೆ ಎಂದು ಯುದ್ಧ ವಿಮಾನಗಳ ಪೈಲಟ್‌ವೊಬ್ಬರು ಹೇಳಿರುವುದಾಗಿ ವರದಿಯಾಗಿದೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿರುವ ಸ್ಕರ್ದು ವಾಯುನೆಲೆಯಲ್ಲಿ (ಗಿಲ್ಗಿಟ್–ಬಲ್ಟಿಸ್ತಾನ್‌) ಜೂನ್‌ನಲ್ಲಿ ಚೀನಾದ ತೈಲಪೂರೈಕೆ ವಿಮಾನವು ಇಳಿದಿತ್ತು. ಅನಂತರದಿಂದ ಭಾರತೀಯ ವಾಯುಪಡೆ ಎಲ್ಲ ಎಚ್ಚರಿಕೆ ಕ್ರಮಗಳನ್ನು ಕಠಿಣಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.